ಕಾರವಾರ: ಭಟ್ಕಳದ (Bhatkal) ಮುರಿನಕಟ್ಟೆ ಧ್ವಂಸ ಪ್ರಕರಣ ಹಿನ್ನೆಲೆ ಮೇ 27ರ ವರೆಗೂ ಭಟ್ಕಳದಲ್ಲಿ ನಿಷೇಧಾಜ್ಞೆ ಇರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್ (Bakrid) ಹಬ್ಬದಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡುವ ಬದಲು, ವಿವಿಧ ಮಸೀದಿಗಳಲ್ಲಿ ನಮಾಜ್ ಮಾಡಲು ನಿರ್ಧಾರ ಮಾಡಿದ್ದಾರೆ.
ಭಟ್ಕಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ದು, ಈ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬಕ್ಕೆ ಸಮಸ್ಯೆ ಆಗದಂತೆ ಮುಸ್ಲಿಮರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಭಟ್ಕಳದ ಈದ್ಗಾ ಮೈದಾನದಲ್ಲಿ ನಮಾಜ್ ಮಾಡದಿರಲು ನಿರ್ಧರಿಸಿದ್ದಾರೆ. ಭಟ್ಕಳದಲ್ಲಿ ಇರುವ ಹತ್ತು ದೊಡ್ಡ ಮಸೀದಿಗಳಲ್ಲಿ ನಮಾಜ್ ಮಾಡಲು ನಿರ್ಧಾರ ಮಾಡಿದ್ದು, ಈ ಸಂದರ್ಭದಲ್ಲಿ ಬಕ್ರೀದ್ ಪ್ರಯುಕ್ತ ಯಾವುದೇ ರ‍್ಯಾಲಿ ಮಾಡದಿರಲು ಸಹ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮೂರಿನಕಟ್ಟೆ ವಿವಾದ| ಭಟ್ಕಳದ ಶಹರ, ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 3 ದಿನ ಮದ್ಯದಂಗಡಿಗಳು ಬಂದ್
ಭಟ್ಕಳದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಏಕಕಾಲದಲ್ಲಿ ನಮಾಜ್ ಮಾಡುತ್ತಾರೆ. ಪ್ರತಿ ವರ್ಷ ಸಾರ್ವಜನಿಕವಾಗಿ ಈದ್ಗಾ ಮೈದಾನದಲ್ಲಿ ನಮಾಜ್ ಮಾಡುತ್ತಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿವರೆಗೂ ನಮಾಜ್‌ಗೆ ಜನ ಸೇರುತ್ತಿದ್ದರು. ಇದೀಗ ಗಲಭೆ ಹಿನ್ನೆಲೆಯಲ್ಲಿ ನಮಾಜ್ ಮಾಡಲು ಸೀಮಿತ ಸ್ಥಳವನ್ನು ಆಯ್ಕೆ ಮಾಡಿದ್ದಾರೆ.
ಭಟ್ಕಳದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಮೇ 28ರ ಬೆಳಗ್ಗೆ 5 ಗಂಟೆಯಿಂದ ಮೇ 29 ರ ಮಧ್ಯರಾತ್ರಿ 12 ಗಂಟೆಯವರೆಗೆ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಿ, ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ. ಇದನ್ನೂ ಓದಿ: ಕಿಡಿ ಹೊತ್ತಿಸಿದ ಮೂರಿನಕಟ್ಟೆ ವಿವಾದ: ಇಂದಿನಿಂದ ಮೂರು ದಿನ ನಿಷೇಧಾಜ್ಞೆ ಜಾರಿ
