-ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರಿಂದ ಲಾಠಿಚಾರ್ಜ್
-ಸ್ಥಳದಲ್ಲಿ ಬಿಗಿ ಬಂದೋಬಸ್ತ್, ಮಂಗಳೂರು ವಲಯ ಐಜಿಪಿ ಭೇಟಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂರಿನಕಟ್ಟೆ ಮರುನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕ್ಷಣಕ್ಷಣಕ್ಕೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿರುವ ಹಿನ್ನೆಲೆ ಇಂದಿನಿಂದ ಮೂರು ದಿನಗಳವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೇ 25ರಿಂದ 27ರವರೆಗೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಐದು ಅಥವಾ ಅದಕ್ಕಿಂದ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಿ ಭಟ್ಕಳ ಎಸಿಯಿಂದ ಆದೇಶಿಸಿದ್ದಾರೆ. ಇದನ್ನೂ ಓದಿ: ಭಟ್ಕಳ ನದಿ ದುರಂತ – ಘಟನೆಯಲ್ಲಿ 2-3 ಗ್ರಾಮದವರಿದ್ದಾರೆ: ಎಸ್ಪಿ ದೀಪನ್ ಮಾಹಿತಿ
ಏನಿದು ವಿವಾದ?
ಮೂರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಆದರೆ, ಹೆದ್ದಾರಿ ಕಾಮಗಾರಿ ಮುಕ್ತಾಯಗೊಂಡ ಬಳಿಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಅದೇ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಕಟ್ಟೆಯನ್ನು ಮರುನಿರ್ಮಾಣ ಮಾಡಿದ್ದರು. ಈ ಮರುನಿರ್ಮಾಣಕ್ಕೆ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದ ಪ್ರಮುಖರಿಂದ ತೀವ್ರ ವಿರೋಧ ವ್ಯಕ್ತವಾಗಿ, ಕಟ್ಟೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಭಾನುವಾರ (ಮೇ 24) ಮುಸ್ಲಿಂ ಸಮುದಾಯದ ನೂರಾರು ಜನರು ಏಕಾಏಕಿ ಮೂರಿನಕಟ್ಟೆ ಜಾಗದಲ್ಲಿ ಜಮಾಯಿಸಿದ್ದರು. ಮರುನಿರ್ಮಾಣಗೊಂಡಿದ್ದ ಕಟ್ಟೆಯನ್ನು ಒಡೆದುರುಳಿಸಲು ಮುಂದಾದಾಗ, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ತೀವ್ರ ಘರ್ಷಣೆ ಸಂಭವಿಸಿದ್ದು, ಮುಸ್ಲಿಮರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಘೋರ ದುರಂತ – ಇಷ್ಟು ದೊಡ್ಡ ಅನಾಹುತ ಇದೇ ಮೊದಲು: ಮಂಕಾಳ ವೈದ್ಯ
ಘಟನೆಯನ್ನು ಖಂಡಿಸಿ ಭಟ್ಕಳ ಪೊಲೀಸ್ ಠಾಣೆ ಹಾಗೂ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಪೊಲೀಸರ ಮೇಲೆ ಹಲ್ಲೆ ನಡೆಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮುಸ್ಲಿಂ ಸಂಘಟನೆಗಳ ಪ್ರಮುಖರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿವಾದಿತ ಜಾಗದಲ್ಲೇ ಕಟ್ಟೆಯನ್ನು ಮರುನಿರ್ಮಾಣ ಕಾಮಗಾರಿ ಮುಂದುವರಿಸಲು ಹಿಂದೂ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡರು. ಆದರೆ, ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪೊಲೀಸರು ಮಧ್ಯಪ್ರವೇಶಿಸಿ, ಕಟ್ಟೆ ನಿರ್ಮಾಣಕ್ಕೆ ಮುಂದಾದ ಹಲವು ಕಾರ್ಯಕರ್ತರನ್ನು ತಡೆದು, ವಶಕ್ಕೆ ಪಡೆದು ಅರೆಸ್ಟ್ ಮಾಡಿದ್ದಾರೆ.
ಸ್ಥಳಕ್ಕೆ ಮಂಗಳೂರು ವಲಯ ಐಜಿಪಿ ಭೇಟಿ – ಬಿಗಿ ಬಂದೋಬಸ್ತ್
ಭಟ್ಕಳದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಡುವ ಸಾಧ್ಯತೆ ಇದ್ದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಇಡೀ ನಗರ ಹಾಗೂ ಪೊಲೀಸ್ ಠಾಣೆಯ ಸುತ್ತಮುತ್ತ ಬಿಗಿ ಖಾಕಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ವಲಯದ ಐಜಿಪಿ ಅಮಿತ್ ಸಿಂಗ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಮಾಹಿತಿ ಪಡೆದಿರುವ ಐಜಿಪಿ, ಸದ್ಯಕ್ಕೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಇದನ್ನೂ ಓದಿ: ಭಟ್ಕಳ ನದಿಯಲ್ಲಿ 8 ಮಂದಿ ಜಲಸಮಾಧಿ – ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
