ರಾಮನಗರ: ಕನಕಪುರದ (Kanakapur) ಐತಿಹಾಸಿಕ ದೇಗುಲ ಮಠದ (Degula Math) ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು (Mummadi Nirvana Swamiji) ಲಿಂಗೈಕ್ಯರಾಗಿರುವ ಹಿನ್ನೆಲೆ, ಮಠದ ಆವರಣದಲ್ಲಿ ಸಾವಿರಾರು ಭಕ್ತರು ಹಾಗೂ ಗಣ್ಯರು ಶ್ರೀಗಳ ಅಂತಿಮ ದರ್ಶನ ಪಡೆದರು.
ವಿವಿಧ ಮಠಾಧೀಶರು, ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಮಠಕ್ಕೆ ಆಗಮಿಸಿ ಶ್ರೀಗಳ ಪಾದಗಳಿಗೆ ನಮಸ್ಕರಿಸಿದರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕನಕಪುರದ ದೇಗುಲ ಮಠಕ್ಕೆ ಆಗಮಿಸಿ, ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಠಕ್ಕೆ ಆಗಮಿಸಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್ಸಿ ಎಸ್. ರವಿ ಕುಮಾರ್ ಉಪಸ್ಥಿತರಿದ್ದರು.

ಅಂತಿಮ ದರ್ಶನದ ವೇಳೆ ಶ್ರೀಗಳೊಂದಿಗಿನ ಒಡನಾಟ ನೆನೆದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ಶ್ರೀಗಳ ಪಾರ್ಥೀವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಕಿರಿಯ ಶ್ರೀಗಳಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸುವ ವೇಳೆ ಸಿಎಂ ಗದ್ಗದಿತರಾದರು. ಶ್ರೀಗಳ ಸಾವಿಗೆ ಕಣ್ಣೀರಿನ ವಿದಾಯ ಹೇಳಿದ ಬಳಿಕ ಸಿಎಂ ಹಾಗೂ ಸಚಿವ ಈಶ್ವರ್ ಖಂಡ್ರೆ ಅವರು ಮಠದ ಆವರಣದಲ್ಲೇ ಕೆಲಕಾಲ ಕುಳಿತು ನುಡಿನಮನ ಸಲ್ಲಿಸಿದರು.
