Connect with us

Bengaluru City

ಮೋದಿ, ಅಮಿತ್ ಶಾ, ನಡ್ಡಾ ಹೆಸರಲ್ಲಿ ಮಹಾ ಮೋಸ- 100 ಕೋಟಿಗೂ ಅಧಿಕ ವಂಚನೆ

Published

on

ನವದೆಹಲಿ/ಬೆಂಗಳೂರು: ಪ್ರಧಾನಿ ಮೋದಿ ಗೊತ್ತು, ಅಮಿತ್ ಶಾ, ಜೆಪಿ ನಡ್ಡಾ ಎಲ್ಲರೂ ಗೊತ್ತು ಅಂತ ಯುವರಾಜ್ ಸ್ವಾಮಿ ಎಂಬ ಮಹಾನ್ ವಂಚಕ ಕೋಟ್ಯಂತರ ರೂಪಾಯಿ ವಂಚಿಸಿರೋದು ಬೆಳಕಿಗೆ ಬಂದಿದೆ. ಅಮಿತ್ ಶಾ ಸೂಚನೆ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಯುವರಾಜ್‍ನ ಮಹಾಮೋಸ ಎಳೆಎಳೆಯಾಗಿ ಬಯಲಾಗಿದೆ.

ಹೌದು. ನೋಡೋಕೆ ಡೀಸೆಂಟ್ ಆಗಿ ಕಾಣಿಸೋ ಯುವರಾಜ ಸ್ವಾಮಿ ಎಂಬ ಐನಾತಿ ಗಿರಾಕಿ ಮಾಡಿರೋದು ಮಾತ್ರ ಎಲ್ಲರೂ ಬೆರಗಾಗೋ ವಂಚನೆ. ನಂಗೆ ಪ್ರಧಾನಿ ಮೋದಿ ಗೊತ್ತು, ಅಮಿತ್ ಶಾ ಗೊತ್ತು, ಜೆಪಿ ನಡ್ಡಾ ಎಲ್ಲಾ ಗೊತ್ತು ಅಂತ ಹೋದಾಗ ಬಂದಾಗ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೇ ತನ್ನ ಮನಿ ಮೇಕಿಂಗ್ ದಂಧೆಗೆ ದುರ್ಬಳಕೆ ಮಾಡಿಕೊಂಡಿದ್ದಾನೆ.

ಓದಿದ್ದು ಅಲ್ಪಸ್ವಲ್ಪವಾದ್ರು ಮಾತು ಮಾತ್ರ ಸತ್ಯ ತಲೆ ಮೇಲೆ ಹೊಡೆದ ರೀತಿ ಮಾತನಾಡಿ ನಂಬಿಸ್ತಾ ಇದ್ದ. ರಾಜಕಾರಣಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳಿಗೆ ಈ ಉಂಡೆನಾಮ ಹಾಕಿಬಿಟ್ಟಿದ್ದಾನೆ. ಹಣವಂತರು ಅಂತ ಗೊತ್ತಾದರೆ ಸಾಕು ನಿಮ್ಮನ್ನೇ ಟಾರ್ಗೆಟ್ ಮಾಡಿ, ಮಕ್ಮಲ್ ಟೋಪಿ ಹಾಕೇ ಬಿಡ್ತಾನೆ.

ಸಿಸಿಬಿ ಪೊಲೀಸರು ಆರೋಪಿ ಯುವರಾಜ್ ಸ್ವಾಮಿ ಪೂರ್ವ ಪರ ತಿಳಿದಾಗ ಬಿಜೆಪಿ ಮುಖಂಡರ ಫೋಟೊಗಳನ್ನ ತೋರಿಸಿ ನಿಗಮ ಮಂಡಳಿ, ಕೇಂದ್ರ ಸಚಿವ, ರಾಜ್ಯ ಸಭೆ ಸದಸ್ಯ ಮಾಡಿಸಿಕೊಡುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಯುವರಾಜ್ ಸ್ವಾಮಿಯ ವಂಚನೆ ಜಾಲ ರೋಚಕವಾಗಿದೆ. ವಿಮಾನಗಳಲ್ಲೇ ಡೀಲ್ ಮಾಡ್ತಿದ್ದ ಯುವರಾಜ ಸ್ವಾಮಿ, ದೆಹಲಿ-ಬೆಂಗಳೂರಿಗೆ ಪ್ಲೈಟ್‍ನಲ್ಲಿ ಸದಾ ಓಡಾಟ ಮಾಡ್ತಿದ್ದ. ರಾಜಕಾರಣಿಗಳ ಪಕ್ಕದಲ್ಲಿ ಸೀಟ್ ಪಡೆದು, ವಿವಿಧ ಆಸೆ ಹುಟ್ಟಿಸ್ತಿದ್ದ. 4 ಕೋಟಿ ಡೀಲ್ ಮಾಡಿದ್ರೆ 2 ಕೋಟಿ ಅಕೌಂಟ್‍ಗೆ, ಇನ್ನುಳಿದ 2 ಕೋಟಿ ಬ್ಲಾಕ್‍ನಲ್ಲಿ ತೆಗೆದುಕೊಳ್ತಿದ್ದ. ಇದೇ ರೀತಿಯಾಗಿ ಈತ ಹಲವು ಮಂದಿಗೆ ಟೋಪಿ ಹಾಕ್ತಿದ್ದ.

ದೊಡ್ಡವರಿಗೆ ‘ಟೋಪಿ’
ಕೇಸ್ 1: ಹಾಲಿ ಪ್ರಭಾವಿ ಸಚಿವರಿಗೆ ಫೇವರ್ ಹೆಸರಲ್ಲಿ ವಂಚನೆ
ಕೇಸ್ 2: ಬೆಂಗಳೂರು ಮೂಲದ ಸಚಿವರಿಗೂ ವಂಚನೆ
ಕೇಸ್ 3: ಮಾಜಿ ರಾಜ್ಯಸಭಾ ಸದಸ್ಯರಿಗೆ ಪುನಾರಾಯ್ಕೆ ಹೆಸರಲ್ಲಿ ದೋಖಾ
ಕೇಸ್ 4: ಸಚಿವರ ಮೂವರು ಆಪ್ತರಿಗೆ ಕೋಟಿಗಟ್ಟಲೆ ವಂಚನೆ
ಕೇಸ್ 5: ರಾಜ್ಯಪಾಲ ಹುದ್ದೆ ಕೊಡಿಸುವ ಅಮಿಷ
ಕೇಸ್ 6: ಐಎಎಸ್ ಅಧಿಕಾರಿಗಳಿಗೂ ಫೇವರ್ ಹೆಸರಲ್ಲಿ ವಂಚನೆ
ಕೇಸ್ 7: ನಿಗಮ-ಮಂಡಳಿ ಹೆಸರಲ್ಲಿ ನಾಮ
ಕೇಸ್ 8: ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಹೆಸರಲ್ಲಿ ವಂಚನೆ

ಆರೋಪಿ ಯುವರಾಜ್ ವಂಚನೆ ಬಗ್ಗೆ ಸಿಸಿಬಿಗೆ ಉದ್ಯಮಿ ಸುದೀಂದ್ರ ರೆಡ್ಡಿ ದೂರು ಕೊಟ್ಟಿದ್ರು. ಕೆಎಸ್‍ಆರ್‍ಟಿಸಿಯಲ್ಲಿ ಅಧ್ಯಕ್ಷ ಪಟ್ಟ ಕೊಡಿಸೋದಾಗಿ ರೆಡ್ಡಿಯಿಂದ ಒಂದು ಕೋಟಿ ಹಣ ಪಡೆದು ಮೊಸ ಮಾಡಿದ್ದ. ಸತತ 10 ಗಂಟೆ ಶೋಧಿಸಿದ ಸಿಸಿಬಿ, 90 ಕೋಟಿ ರೂ ಮೌಲ್ಯದ ಚೆಕ್ ಜೊತೆ 16 ಲಕ್ಷ ರೂಪಾಯಿ ನಗದು ಸೀಜ್ ಮಾಡಿದೆ. ಅಲ್ಲದೆ, ಆರ್‍ಎಸ್‍ಎಸ್, ಬಿಜೆಪಿ ನಾಯಕರ ಲೆಟರ್ ಹೆಡ್‍ಗಳು, ನಕಲಿ ಸೀಲ್‍ಗಳು ಸೇರಿ ಅಪಾರ ಪ್ರಮಾಣದ ದಾಖಲೆ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಆದರೆ ನಾನು ಯಾವುದೇ ಅಪರಾಧ ಮಾಡಿಲ್ಲ. ರಾಜಕೀಯ ಪ್ರೇರಿತ ಉದ್ದೇಶಪೂರ್ವಕವಾಗಿ ತೊಂದರೆ ಕೊಡಲಾಗುತ್ತಿದೆ. ಎಲ್ಲವನ್ನು ನ್ಯಾಯಾಲಯ ನೋಡಿಕೊಳ್ಳುತ್ತೆ. ಅಂತ ಸಿಸಿಬಿ ವಶದಲ್ಲಿರುವಾಗಲೇ ಯುವರಾಜ್ ಸ್ವಾಮಿ ಅಬ್ಬರಿಸಿದ್ದಾನೆ.

ಅಂದಹಾಗೆ ರಾಜ್ಯದ ಪ್ರಭಾವಿ ರಾಜಕಾರಣಿಗೆ ರಾಜ್ಯಸಭಾ ಟಿಕೆಟ್ ಕೊಡಿಸೋದಾಗಿ ಈತ ವಂಚಿಸಿದ್ದ, 10 ಕೋಟಿ ಹಣ ಪಡೆದು ಟಿಕೆಟ್ ಕೊಡೋದಾಗಿ ಹೇಳಿದ್ದ, ಆದರೆ ಟಿಕೆಟೂ ಇಲ್ಲ. 10 ಕೋಟಿ ಹಣವೂ ವಾಪಸ್ ಬಂದಿಲ್ಲ. ಇದರಿಂದ ಸಿಟ್ಟಿಗೆದ್ದ ಆ ರಾಜಕಾರಣಿಯೇ ಬಿಜೆಪಿ ಹೈಕಮಾಂಡ್‍ಗೆ ದೂರು ಕೊಟ್ಟಿದ್ದರು. ಸಿಸಿಬಿಗೂ ಮಾಹಿತಿ ಕೊಟ್ಟಿದ್ದರು. ಕೊನೆಗೆ, ಅಮಿತ್ ಶಾ ಸೂಚನೆ ಮೇರೆಗೆ ಈ ಸಿಸಿಬಿ ಪೊಲೀಸರು ಕಾರ್ಯೋನ್ಮುಖರಾದರು ಅಂತಲೂ ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

www.publictv.in