Connect with us

Bengaluru City

ವಿಧಾನಸೌಧದ ಪಶ್ಚಿಮ ಗೇಟ್‍ನಲ್ಲಿ ಸಿಕ್ತು ಕಂತೆ ಕಂತೆ ಹಣ – ಸಚಿವರ ಕಚೇರಿ ಟೈಪಿಸ್ಟ್ ಬಳಿಯೇ ಹಣ ಪತ್ತೆ!

Published

on

ಬೆಂಗಳೂರು: ವಿಧಾನ ಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದೆ.

ಮೋಹನ್ ಎಂಬಾತನ ಬಳಿ ಸುಮಾರು 25.76 ಲಕ್ಷ ರೂ. ಹಣ ಪತ್ತೆಯಾಗಿದೆ. ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಾ ವೇಳೆ ಬ್ಯಾಗ್ ಪತ್ತೆಯಾಗಿದ್ದು, ಅನುಮಾನಗೊಂಡ ಪೊಲೀಸರು ತೆರೆದು ನೋಡಿದಾಗ ಹಣ ಇರುವುದು ಬೆಳಕಿಗೆ ಬಂದಿದೆ.

ಹಣ ಪತ್ತೆಯಾದ ಕೂಡಲೇ ಮೋಹನ್ ನನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದ್ದು, ಹಣದ ಮೂಲದ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಮೋಹನ್ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಟೈಪಿಸ್ಟ್ ಎನ್ನುವ ಪ್ರಾಥಮಿಕ ಮಾಹಿತಿ ಲಭಿಸಿದೆ. ಆದರೆ ಭಾರೀ ಮೊತ್ತದ ಹಣ ಹೇಗೆ ವಿಧಾನಸೌಧದ ಒಳಗೆ ಪ್ರವೇಶಿಸಿದೆ ಎನ್ನುವ ಬಗ್ಗೆ ಪ್ರಶ್ನೆ ಎದ್ದಿದೆ. ಅಲ್ಲದೇ ಈ ಹಣ ಸರ್ಕಾರಿ ಯೋಜನೆಯೊಂದರ ಗುತ್ತಿಗೆಯನ್ನು ಮಂಜೂರು ಮಾಡಿಸಿಕೊಳ್ಳಲು ಸಚಿವರೊಬ್ಬರಿಗೆ ಕೊಡಲು ತಂದಿದ್ದ ಹಣ ಎನ್ನಲಾಗಿದೆ.

ಹಣ ಪತ್ತೆಯಾಗುತ್ತಿದಂತೆ ಮೋಹನ್ ಸ್ಥಳದಿಂದ ಪರಾರಿಯಾಗಲು ಕೂಡ ಯತ್ನಿಸಿದ್ದ. ಈ ಬಗ್ಗೆ ಯಾರದರೂ ದೂರು ನೀಡಿದರೆ ಮಾತ್ರ ತನಿಖೆ ಮುಂದುವರಿಸಲು ಸಾಧ್ಯ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಅವರು, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಇಂದು ನಾನು ವಿಧಾನಸೌಧದ ಕಚೇರಿಗೂ ಹೋಗಿರಲಿಲ್ಲ. ಕ್ಷೇತ್ರದ ಕೆಲಸ ನಿಮಿತ್ತ ಇಲ್ಲೇ ಉಳಿದ್ದೇನೆ. ಅಲ್ಲದೇ ಮೋಹನ್ ಯಾರು ಎಂಬ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ನನ್ನ ಆಪ್ತ ಸಹಾಯಕರು ಬೇರೆ ಇದ್ದಾರೆ. ಈ ಕುರಿತು ಅವರಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ. ಸುಳ್ವಾಡಿ ಪ್ರಕರಣದ ಬಳಿಕ ನಾನು ಈಗ ಹೆಚ್ಚಾಗಿ ಕ್ಷೇತ್ರದಲ್ಲೇ ಇರುವ ಅನಿವಾರ್ಯತೆ ಇದ್ದು, ಆದ್ದರಿಂದ ಕಚೇರಿಯಲ್ಲಿ ಯಾರನ್ನು ನೇಮಕ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಮುಖ್ಯವಾಗಿ ವಿಧಾನಸೌಧದ ಪ್ರವೇಶದ ಎಲ್ಲಾ ಗೇಟ್‍ಗಳಲ್ಲೂ ಹೆಚ್ಚಿನ ಭದ್ರತೆ ಇರುತ್ತದೆ. ವಿಧಾನಸೌಧದ ಒಳ ಹೋಗುವ ಎಲ್ಲಾ ವಾಹನಗಳನ್ನು ಪರಿಶೀಲನೆ ನಡೆಸಿದ ಬಳಿಕವೇ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ವಿಧಾನಸೌಧದಿಂದ ಹೊರ ಹೋಗುತ್ತಿದ್ದ ಕಾರಿನ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಮೊದಲೇ ಇಷ್ಟು ಮೊತ್ತದ ಹಣ ಒಳಗೆ ಹೋಗಿದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭಿವಿಸಿದ್ದು, ಇದರ ಹಿಂದೆ ಅಧಿಕಾರಿಗಳ ಸಹಾಯ ಇದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ.

ಸಿಕ್ಕಿಬಿದ್ದಿದ್ದು ಹೇಗೆ?
ಸಚಿವ ಪುಟ್ಟರಂಗಶೆಟ್ಟಿಯವರ ಮೂರನೇ ಮಹಡಿಯಿಂದ ಕೆಳಗಡೆ ಬರುತ್ತಿರುವ ವ್ಯಕ್ತಿಯ ಬಳಿ ದಾಖಲೆಯಿಲ್ಲದ ಹಣ ಇದೆ ಎನ್ನುವ ಮಾಹಿತಿಯನ್ನು ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೆಂಗಲ್ ಗೇಟ್ ಬಳಿ ಕೈಯಲ್ಲಿ ಬ್ಯಾಗ್ ಹಿಡಿದು ಬಂದ ವ್ಯಕ್ತಿಯನ್ನು ಮಾಧ್ಯಮದ ಮಂದಿ ಅಡ್ಡ ಹಾಕಿ, ಯಾರದ್ದು ಈ ಹಣ? ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ನಾನು ಸಚಿವರ ಪಿಎ. ನನ್ನನ್ನು ಬಿಡಿ ಎಂದು ಹೇಳಿ ಬೈಕನ್ನು ಏರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಮಯದಲ್ಲಿ ಮಾಧ್ಯಮದವರು ಜೋರಾಗಿ ಕೂಗಿಕೊಂಡಾಗ ಸ್ಥಳಕ್ಕೆ ಬಂದ ಪೊಲೀಸರು ಮೋಹನನ್ನು ಮೋಹನ್ ಬಳಿಯಿದ್ದ ಬ್ಯಾಗನ್ನು ತೆರೆದು ನೋಡಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *