ಬೆಂಗಳೂರು: ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಬಿಜೆಪಿಯವರದ್ದು ಒಂದು ದಿನದ ನಾಟಕ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರ ಮೆಟ್ರೋ ಪ್ರಯಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಬರೀ ನಾಟಕ. ದಿನ ಮೆಟ್ರೋ ಹತ್ತಿದ್ರೆ ನಾವೂ ಒಪ್ತೀವಿ. ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಇದೆಲ್ಲ ಒಂದು ದಿನದ ನಾಟಕ ಅಷ್ಟೇ ಬಿಜೆಪಿಯವರದ್ದು. ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ. ಅವರು ನಮ್ಮ ಶಕ್ತಿ ಯೋಜನೆ ಪ್ರಯೋಜನ ಪಡೆದುಕೊಳ್ಳಲಿ. ಪ್ರಶ್ನೆ ಇರೋದು ವಿಜಯೇಂದ್ರ ಮೆಟ್ರೋ ಹತ್ತುವಂತೆ ಮಾಡಿದ್ಯಾರು? ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಹಾಗೆ ಮಾಡಿದವರು ಯಾರು? ಇದಕ್ಕೆ ಉತ್ತರ ಬೇಕಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಿತವ್ಯಯಕ್ಕೆ ಮೋದಿ ಕರೆ – ಮೆಟ್ರೋದಲ್ಲಿ ಸಂಚರಿಸಿದ ಕೇಂದ್ರ ಸಚಿವ ಸೋಮಣ್ಣ, ಸಂಸದ ಪಿ.ಸಿ.ಮೋಹನ್
ಎಸ್‌ಐಆರ್ ವಿಚಾರವಾಗಿ ಮಾತನಾಡಿ, ಎಸ್‌ಐಆರ್ ಅನ್ನೋದು ಬಿಜೆಪಿ ಗೆಲ್ಲಿಸಲೆಂದೇ ಮಾಡಿರೋ ಡಿಸೈನ್. ಇದೊಂದು ಸಂಪೂರ್ಣ ಅಸಂವಿಧಾನಾತ್ಮಕ. ಎಸ್‌ಐಆರ್ ಬೇಡ ಅಂತಿಲ್ಲ, ಸರಿಯಾಗಿ ಮಾಡಿ ಅಂತಿದ್ದೇವೆ. ಉದಾಹರಣೆಗೆ ನನ್ನ ಹೆಸರು ಪ್ರಿಯಾಂಕ್. ಈ ಹೆಸರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೋಟ್ ಡಿಲೀಟ್ ಆಗಲಿದೆ. ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ವೋಟ್ ಡಿಲೀಟ್ ಆಗಿದೆ. ಬಹುತೇಕ ಜನರನ್ನು ಮತದಿಂದ ದೂರ ಇಟ್ಟಂತೆ ಆಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರದ ಆರ್ಥಿಕ ನೀತಿ ಕುರಿತು ಪ್ರತಿಕ್ರಿಯಿಸಿ, ಕೇಂದ್ರದ ಆರ್ಥಿಕ ನೀತಿಯಿಂದ ಏನಾಗಿದೆ? ಕಾಂಗ್ರೆಸ್‌ನವರು ಬಂದರೆ ಮಂಗಳಸೂತ್ರ ಕಸಿದುಕೊಳ್ತಾರೆ ಅಂತಾ ಮೋದಿ ಅವರು ಭಾಷಣ ಮಾಡಿದ್ರು. ಈಗ ಅವರು ಮಾಡ್ತಿರೋದೇನು? ಚಿನ್ನ ಖರೀದಿ ಮಾಡಬೇಡಿ ಅಂತಿದಾರೆ. ಆರ್ಥಿಕ ನೀತಿ ಚೆನ್ನಾಗಿದೆ ಅನ್ನೋದಾದರೆ ಮೊದಲು ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಸೇಲ್ಸ್ ಟ್ಯಾಕ್ಸ್ ಕಡಿಮೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮೋದಿ ಅವರು ಮಾಡುವ ಎಲ್ಲಾ ಅವಾಂತರಗಳಿಗೆ ನಾವೇ ಹೊರೆ ಹೊರಬೇಕಾ? ಇಂಡಿಯಾ-ಚೈನಾ, ಕೊರೊನಾ ಅವಧಿ, ಪಾಕಿಸ್ತಾನದ ವಿರುದ್ಧ ಯುದ್ಧ ಹೀಗೆ ಎಲ್ಲಾ ಸಮಯದಲ್ಲೂ ನಾವೇ ಹೊರೆ ಹೊರಬೇಕಾ? ಅವರೇನು ಕತ್ತೆ ಕಾಯ್ತಿದಾರಾ? ಇವರೇನು ಮಾಡ್ತಿದಾರೆ ಎಂದು ಕಟುವಾಗಿ ಪ್ರಶ್ನಿಸಿದರು. ಇದನ್ನೂ ಓದಿ: 1,000 ವರ್ಷ ಹಳೆಯ ಚೋಳರ ಕಾಲದ ತಾಮ್ರ ಫಲಕಗಳನ್ನು ಭಾರತಕ್ಕೆ ಹಿಂದಿರುಗಿಸಿದ ನೆದರ್ಲೆಂಡ್ಸ್
ನೀಟ್ ಪರೀಕ್ಷೆ ವಿಚಾರವಾಗಿ ಮಾತನಾಡಿ, ಇದರಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ನವರು ಇದ್ದಾರೆ. ಅವರಿಗೇ ಇದರ ಪಾಲು ಹೋಗ್ತಿದೆ. ಯಾಕೆ ಇನ್ನೂ ರಾಜೀನಾಮೆ ಕೊಡ್ತಿಲ್ಲ? ಹಗಲಿರುಳು ಓದಿದ ಮಕ್ಕಳ ಭವಿಷ್ಯ ಏನಾಗಬೇಕು? ಮೊದಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಬೇಕು. ಜೆನ್ ಝಿ ಅಂತಾ ಮೋದಿ ಹೇಳ್ತಾರೆ, ಪರೀಕ್ಷಾ ಪೇ ಚರ್ಚೆ ಮಾಡ್ತಾರೆ. ನೀಟ್ ಬಗ್ಗೆ ಚರ್ಚೆ ಯಾವಾಗ ಮಾಡ್ತಾರೆ ಮೋದಿ? ಈಗ ಎಲ್ಲೋದರು ದತ್ತಾತ್ರೇಯ ಹೊಸಬಾಳೆ ಅವರು? ಆರ್‌ಎಸ್‌ಎಸ್‌ನವರು? ಇಲ್ಲಿ ಅವರ ಕಡೆಯವರೆ ಹಾಳು ಮಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು.

