Connect with us

Chitradurga

ಸರ್ಕಾರದ ವಿರುದ್ಧ ಕೋಟೆನಾಡಿನ ರೈತರ ಆಕ್ರೋಶ

Published

on

Share this

ಚಿತ್ರದುರ್ಗ: ರಾಗಿ ಖರೀದಿಸಿ ಬೆಂಬಲ ಬೆಲೆ ಹಣ ನೀಡಲು ಮೀನಾಮೇಷ ಏಣಿಸುತ್ತಿರುವ ಸರ್ಕಾರದ ವಿರುದ್ಧ ಕೋಟೆನಾಡಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬರದನಾಡು ಚಿತ್ರದುರ್ಗ ಜಿಲ್ಲೆಯ ಪ್ರಮುಖ ಆಹಾರ ಬೆಳೆ ಎನಿಸಿರುವ ರಾಗಿ ಬೆಳೆದ ರೈತರು, ಸರ್ಕಾರ ಸೂಚಿಸಿದಂತೆ ಬೆಂಬಲಬೆಲೆ ಸಿಗುವುದೆಂಬ ಆಸೆಯಿಂದ ಆಹಾರ ಪಡಿತರಕ್ಕಾಗಿ ತಮ್ಮ ರಾಗಿ ಬೆಳೆಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ಆದ್ರೆ ಈವರೆಗೆ ಅನ್ನದಾತರಿಗೆ ಬೆಂಬಲ ಬೆಲೆಯ ಹಣವನ್ನು ಸರ್ಕಾರ ನೀಡಿಲ್ಲ. ಈ ಬಾರಿ ಬರದನಾಡಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಹೊಲದಲ್ಲಿ ಬಿತ್ತನೆ ಮಾಡಲು ಚಿತ್ರದುರ್ಗ ಜಿಲ್ಲೆಯ ರೈತರು ಸಜ್ಜಾಗಿದ್ದಾರೆ. ಸಂಕಷ್ಟದ ವೇಳೆಯೂ ರಾಗಿ ಬೆಳೆದು ಸರ್ಕಾರಕ್ಕೆ ಮಾರಾಟ ಮಾಡಿದರು ಸಹ ಕೈನಲ್ಲಿ ಕಾಸಿಲ್ಲದೇ ಬೀಜ ಗೊಬ್ಬರ ತರಲು ಹಣವಿಲ್ಲದಂತಾಗಿ ಅನ್ನದಾತರು ಪರದಾಡುವಂತಾಗಿದೆ. ಇದನ್ನೂ ಓದಿ:  45 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ – ಬೆಂಗಳೂರು ವರದಿ ಬಿಡುಗಡೆ

ಕಳೆದ ವರ್ಷ ಲಕ್ಷಾಂತರ ಜನ ರೈತರು ರಾಗಿಯನ್ನು ಬೆಳೆದಿದ್ದರು. ಸರ್ಕಾರದ ಮನವಿಯಂತೆ  ಕ್ವಿಂಟಾಲ್‍ಗೆ 3250 ರೂಪಾಯಿ ಬೆಂಬಲ ಬೆಲೆ ಸಿಗುವುದೆಂಬ ಆಸೆಯಿಂದ ಸರ್ಕಾರದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಸರ್ಕಾರದಿಂದ ಹಣ ಬರುವುದೆಂಬ ನಿರೀಕ್ಷೆಯಿಂದ ಈ ಬಾರಿ ಶೇಂಗಾ, ಈರುಳ್ಳಿ ಬಿತ್ತನೆ ಮಾಡಲು ಜಮೀನನ್ನು ಸಜ್ಜುಗೊಳಿಸಿ ಕಾಯುತ್ತಿದ್ದಾರೆ. ರಾಗಿಯನ್ನು ಮಾರಾಟ ಮಾಡಿ ನಾಲ್ಕೈದು ತಿಂಗಳುಗಳು ಕಳೆದಿವೆ. ಆದರೆ ನಯಾಪೈಸೆ ರಾಗಿ ಖರೀದಿ ಹಣ ರೈತರ ಖಾತೆಗೆ ಸರ್ಕಾರದಿಂದ ಬಂದಿಲ್ಲ. ಹೀಗಾಗಿ ಸರ್ಕಾರದ ನಿರ್ಲಕ್ಷದ ವಿರುದ್ಧ ಕೋಟೆನಾಡಿನ ಅನ್ನದಾತರು ಕಿಡಿಕಾರಿದ್ದಾರೆ.

ಆಹಾರ ಇಲಾಖೆ ಅಧಿಕಾರಿಗಳಿಗೆ ರೈತರು ದುಂಬಾಲು ಬಿದ್ದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ ಅಂತ ಸುಲಭವಾಗಿ ಹೇಳುತಿದ್ದಾರೆ. ಹೀಗಾಗಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ರೈತನ ಜಮೀನಿನ ಮೇಲೆ ಬ್ಯಾಂಕ್ ನೀಡುವ ಸಾಲಕ್ಕೆ ಒಂದು ದಿನ ವಿಳಂಬವಾದರೂ ದಿನದಿಂದ ದಿನಕ್ಕೆ ನೊಟೀಸ್, ಬೆದರಿಕೆ ಹಾಕುವ ಸರ್ಕಾರ ರೈತನಿಂದ ಖರೀದಿಸಿದ ರಾಗಿ ಬೆಳೆಗೆ ಹಣ ನೀಡದಿರೋದು ವಿಪರ್ಯಾಸವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement