ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ? – ಇಂದು ನಡೆಯಲಿದೆ ತಾಂಬೂಲ ಪ್ರಶ್ನೆ

ಮಂಗಳೂರು: ಕಾಶಿಯ ಜ್ಞಾನವಾಪಿ ಮಸೀದಿಯ ವಿವಾದದ ನಡುವೆ ಇದೀಗ ಮಂಗಳೂರಿನ ಮಳಲಿ ಮದನಿ ದರ್ಗಾದ ವಿವಾದದ ಕಾವು ಹೆಚ್ಚಿದೆ. ಇಲ್ಲಿ ಹಿಂದೂ ದೇವಾಲಯ ಇತ್ತು ಅನ್ನೋ ಕುರುಹುಗಳು ಪತ್ತೆಯಾಗಿದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದು, ಸ್ಥಳ ಇತಿಹಾಸಕ್ಕೆ ತಾಂಬೂಲ ಪ್ರಶ್ನೆಗೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ತಾಂಬೂಲ ಪ್ರಶ್ನೆ ನಡೆಯಲಿದೆ.
ಹಿಂದೂಪರ ಸಂಘಟನೆಗಳ ನೇತ್ರತ್ವದಲ್ಲಿ ವಿವಾದಿತ ಮಳಲಿ ದರ್ಗಾದ ಅನತಿ ದೂರದಲ್ಲೇ ಇಂದು ಬೆಳಗ್ಗೆ 8 ಗಂಟೆಗೆ ತಾಂಬೂಲ ಪ್ರಶ್ನೆ ನಡೆಯಲಿದೆ. ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆಸಲಾಗುವುದು. ಇದನ್ನೂ ಓದಿ: ಜ್ಞಾನವಾಪಿ ಕೇಸ್ – ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ
ತಳಿರು ತೋರಣಗಳಿಂದ ಭಜನಾ ಮಂದಿರವನ್ನು ಶೃಂಗಾರಗೊಳಿಸಲಾಗಿದ್ದು, ಭಜನಾ ಮಂದಿರದ ಮುಂಭಾಗ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇರಳ ಮೂಲದ ಪೊದುವಾಲ್‌ರಿಂದ ತಾಂಬೂಲ ಪ್ರಶ್ನೆ ನಡೆಯಲಿದ್ದು, ಮಸೀದಿ ಸುತ್ತಮುತ್ತ ದೈವಿ ಶಕ್ತಿ ಇದ್ಯಾ ಎಂಬ ಬಗ್ಗೆ ಪ್ರಶ್ನೆ ಕೇಳಲಾಗುವುದು. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆ ಹಚ್ಚಲಾಗುವುದು ಹಿಂದೂಪರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ತಾಂಬೂಲ ಪ್ರಶ್ನೆ ನಡೆಯಲಿರುವ ಭಜನಾ ಮಂದಿರದ ಸುತ್ತ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ವಿವಾದಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಮೂಲಕ ಕ್ರಮವಹಿಸಲಾಗಿದೆ. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. 2 ಎಸಿಪಿ, 7 ಇನ್ಸ್‌ಪೆಕ್ಟರ್, 12 ಪಿಎಸ್‌ಐ, 10 ಎಎಸ್‌ಐ, 120 ಸಿವಿಲ್ ಸ್ಟಾಪ್ ಹಾಗೂ 3 ಕೆಎಸ್‌ಆರ್‌ಪಿ ತುಕಡಿ, 3 ಸಿಎಆರ್ ತುಕಡಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ವಿವಾದಿತ ದರ್ಗಾದ ಸ್ಥಳದಲ್ಲೂ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ದರ್ಗಾ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲರ ಕರೆ
ಏನಿದು ವಿವಾದ?
ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರೋ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು. ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು. ಇದರ ನಡುವೆ ವಿಹೆಚ್‌ಪಿ ಇಂದು ತಾಂಬೂಲ ಪ್ರಶ್ನೆ ಇಡುತ್ತಿದ್ದು, ಈ ಪ್ರಶ್ನೆಯಲ್ಲಿ ಸಿಕ್ಕ ಅಂಶದಂತೆ ಮುಂದುವರಿಯಲು ತೀರ್ಮಾನಿಸಿದೆ.