ಮಂಡ್ಯ: ಕೆಆರ್‌ಎಸ್ ಡ್ಯಾಂ (KRS) ಹಿನ್ನೀರಿನಲ್ಲಿ ವರ್ಷಗಳ ಕಾಲ ಮುಳುಗಿದ್ದ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಮತ್ತೆ ಬೆಳಕಿಗೆ ಬಂದಿದೆ. ಡ್ಯಾಂ ನೀರಿನ ಮಟ್ಟ ಕುಸಿದ ಪರಿಣಾಮ ಕಾಣಿಸಿಕೊಂಡಿರುವ ಈ ದೇವಸ್ಥಾನ ಇದೀಗ ಪ್ರವಾಸಿಗರು ಹಾಗೂ ಫೋಟೋಶೂಟ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕುಗೊಳ್ಳದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 81 ಅಡಿಗೆ ಕುಸಿದಿದೆ. ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಆತಂಕ ಮೂಡಿಸಿದ್ದರೆ, ಮತ್ತೊಂದೆಡೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿದ್ದ ಪುರಾತನ ದೇವಸ್ಥಾನ ಮತ್ತೆ ಗೋಚರವಾಗಿದೆ.ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ
ಮಂಡ್ಯ ಜಿಲ್ಲೆಯ ಬೋರೆಆನಂದೂರು ಗ್ರಾಮದ ಸಮೀಪದ ಕೆಆರ್‌ಎಸ್ ಹಿನ್ನೀರಿನಲ್ಲಿ ಇರುವ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಇದೀಗ ಸಂಪೂರ್ಣವಾಗಿ ಕಾಣಿಸುತ್ತಿದೆ. ಕೆಆರ್‌ಎಸ್ ಡ್ಯಾಂ ನಿರ್ಮಾಣದ ವೇಳೆ ದೇವಸ್ಥಾನದ ಮೂರ್ತಿಯನ್ನು ಮಜ್ಜಿಗೆಪುರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ದೇವಸ್ಥಾನದ ಕಟ್ಟಡ ಮಾತ್ರ ಅಲ್ಲಿಯೇ ಉಳಿದಿತ್ತು.
ಸಾಮಾನ್ಯವಾಗಿ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 90 ಅಡಿಗಿಂತ ಕೆಳಗೆ ಇಳಿದಾಗ ಈ ದೇವಸ್ಥಾನ ಗೋಚರಿಸುತ್ತದೆ. ಈ ಬಾರಿಯೂ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ದೇವಸ್ಥಾನ ಮತ್ತೆ ಬೆಳಕಿಗೆ ಬಂದಿದೆ.
ದೇವಸ್ಥಾನ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಅನೇಕರು ಸ್ಥಳಕ್ಕೆ ಭೇಟಿ ನೀಡಿ ದೇವಸ್ಥಾನ ವೀಕ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣವೂ ಜೋರಾಗಿದೆ. ಇತ್ತೀಚೆಗೆ ಬಿಗ್‌ಬಾಸ್ ಸ್ಪರ್ಧಿ ಹಾಗೂ ಕಿರುತೆರೆ ನಟಿ ನಮ್ರತಾ ಗೌಡ ಕೂಡ ಇಲ್ಲಿ ಫೋಟೋಶೂಟ್ ನಡೆಸಿದ್ದು, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಡಿವೈಡರ್‌ಗೆ ಬೈಕ್ ಡಿಕ್ಕಿ – ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು
