Sunday, 15th December 2019

ಒಟ್ಟೊಟ್ಟಿಗೆ ಮನೆ ಮಾರಾಟಕ್ಕಿಟ್ಟ ಕಾಮಿಡಿ ನಟರು!

ಬೆಂಗಳೂರು: ಹೀಗೆಂದಾಕ್ಷಣ ಯಾರಿಗಾದರೂ ಗಾಬರಿಯಾಗೋದು ಸಹಜವೇ. ಆದರೆ ಕನ್ನಡದ ಖ್ಯಾತ ಕಾಮಿಡಿ ಕಲಾವಿದರಾದ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಮಾರಾಟಕ್ಕಿಟ್ಟಿರೋ ಮನೆ ಸೇರಿಕೊಂಡು ಭೂತ ಪ್ರೇತ ಬಾಧೆಗೀಡಾಗಿರೋದಂತೂ ಸತ್ಯ. ಇಂಥಾದ್ದು ಸಂಭವಿಸಿರೋದು ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಎಂಬ ಚಿತ್ರದ ವಿಚಾರದಲ್ಲಿ. ಇದರಲ್ಲಿ ಈ ನಾಲ್ವರು ಲೀಡ್ ಕಾಮಿಡಿ ನಟರು ಡಿಫರೆಂಟಾಗಿರೋ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ಮಾರಾಟಕ್ಕಿಟ್ಟಿರೋ ಮನೆಯೊಳಗಿನ ವಿಚಿತ್ರ ಬೂತಬಾಧೆಯಿಂದ ತಾವು ಕಂಗಾಲಾಗಿ ಪ್ರೇಕ್ಷಕರಲ್ಲಿ ನಗೆಯುಕ್ಕಿಸಲು ರೆಡಿಯಾಗಿದ್ದಾರೆ.

ಸಾಧು ಕೋಕಿಲಾ ಮತ್ತು ಚಿಕ್ಕಣ್ಣರಂಥಾ ನಟರನ್ನು ಈವರೆಗೂ ಕನ್ನಡದ ಪ್ರೇಕ್ಷಕರು ನಾನಾ ಪಾತ್ರಗಳಲ್ಲಿ ನೋಡಿದ್ದಾರೆ. ಆದರೆ ಇದೇ ವಾರ ಬಿಡುಗಡೆಯಾಗಲಿರುವ ಮನೆ ಮಾರಾಟಕ್ಕಿದೆ ಎಂಬ ಚಿತ್ರದಂಥಾ ಪಾತ್ರಗಳಲ್ಲಿ ಈ ಹಿಂದೆಂದೂ ನೋಡಿರಲು ಸಾಧ್ಯವೇ ಇಲ್ಲ ಅನ್ನೋದು ಚಿತ್ರತಂಡದ ವಿಶ್ವಾಸ. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಟ್ರೇಲರ್‍ನಲ್ಲಿ ಇವರೆಲ್ಲರ ಪಾತ್ರಗಳ ಝಲಕ್‍ಗಳೂ ಸ್ಪಷ್ಟವಾಗಿಯೇ ಕಾಣಿಸಿವೆ. ಆದರೆ ಅದನ್ನೂ ಮೀರಿದ ಮಜಾ ಈ ಪಾತ್ರಗಳಿಂದ ಪ್ರೇಕ್ಷಕರಿಗೆ ಸಿಗಲಿದೆಯಂತೆ.

ಸಾಧು ಕೋಕಿಲಾ ಕನ್ನಡ ಚಿತ್ರರಂಗದ ಹೆಮ್ಮೆಯ ಪ್ರತಿಭಾವಂತ ಹಾಸ್ಯ ಕಲಾವಿದ. ಅವರೊಂದು ಸಿನಿಮಾದಲ್ಲಿ ನಟಿಸಿದ್ದಾರೆಂದರೆ, ಅದು ವಿಶೇಷವಾಗಿರುತ್ತದೆಂದೇ ಅರ್ಥ. ಅವರ ಪಾತ್ರದ ಮೇಲೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆಉಗಳೂ ಇರೋದು ಸುಳ್ಳಲ್ಲ. ಆದರೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಮಾತ್ರ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಸಾಧು ಮಹಾರಾಜರ ಪಾತ್ರ ಮೂಡಿ ಬಂದಿದೆಯಂತೆ. ಇಲ್ಲಿ ನಾಲಕ್ಕು ಹಾಸ್ಯ ಕಲಾವಿದರ ಪಾತ್ರವೂ ಕೂಡಾ ಒಂದಕ್ಕಿಂತ ಒಂದು ಚೆಂದ ಎಂಬಂತೆ ಮೂಡಿ ಬಂದಿದೆ ಎಂಬ ಭರವಸೆ ನಿರ್ದೇಶಕರಲ್ಲಿದೆ. ಅದೇನೆಂಬುದು ಇನ್ನು ದಿನದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.

Leave a Reply

Your email address will not be published. Required fields are marked *