– ಇನ್ಶೂರೆನ್ಸ್‌ಗಾಗಿ ಸತ್ಯ ಮುಚ್ಚಿಟ್ಟಳಾ ಪಾಪಿ ಪತ್ನಿ?
ಹಾಸನ: ಇಲ್ಲಿನ (Hassan) ಬಿಟ್ಟಗೋಡನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬನ ತಾರಾತುರಿ ಅಂತ್ಯಕ್ರಿಯೆ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಪತ್ನಿ ಹಾಗೂ ಅಪ್ರಾಪ್ತ ಮಗ ಸೇರಿ ಹಲ್ಲೆ ಮಾಡಿ ಕೊಂದು, ಇನ್ಶೂರೆನ್ಸ್ ಹಣ ಕೈತಪ್ಪುತ್ತದೆ ಎಂದು ಆತುರಾತುರದಲ್ಲಿ ಅಂತ್ಯಕ್ರಿಯೆ ನಡೆಸಿದ ಆರೋಪ ಕೇಳಿಬಂದಿದೆ.
ಮೇ 18 ರಂದು ಹಾಸನ ನಗರದ ತಣ್ಣೀರುಹಳ್ಳದ ನಿವಾಸಿ ಗುರುಮೂರ್ತಿಯವರು ಮನೆಯಲ್ಲಿ ಮಂಚದ ಮೇಲೆ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದರು. ಆನಂತರ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಪತ್ನಿ ವೀಣಾ ಹಾಗೂ ಅಪ್ರಾಪ್ತ ಪುತ್ರ ಸೇರಿ ಗುರುಮೂರ್ತಿ ಮೇಲೆ ಹಲ್ಲೆ ನಡೆಸುವ ದೃಶ್ಯ ಸೆರೆಯಾಗಿರುವುದು ಗೊತ್ತಾಗಿತ್ತು. ಹಲ್ಲೆಯಿಂದಲೇ ಪುತ್ರ ಸಾವನ್ನಪ್ಪಿರುವುದಾಗಿ ಗುರುಮೂರ್ತಿ ತಾಯಿ ರೇಣುಕಮ್ಮ ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ, ಹೂತಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದನ್ನೂ ಓದಿ: 7 ಲಕ್ಷ ಕೊಟ್ರೂ ಕಾರಿಗೆ ಡಿಮ್ಯಾಂಡ್ – ವರದಕ್ಷಿಣೆ ಚಿತ್ರಹಿಂಸೆಗೆ ಇನ್ಸ್ಟಾ ಇನ್ಫ್ಲೂಯೆನ್ಸರ್ ಬಲಿ
ಕಳೆದ ಹದಿನೇಳು ವರ್ಷದ ಹಿಂದೆ ಮೈಸೂರು ಮೂಲದ ಗುರುಮೂರ್ತಿ ಹಾಗೂ ಹಾಸನ ಮೂಲದ ವೀಣಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಗುರುಮೂರ್ತಿ ತಣ್ಣೀರುಹಳ್ಳದಲ್ಲಿ ಕೇರಳಾಪುರ ಮಿಲ್ಟ್ರಿ ಹೋಟೆಲ್ ನಡೆಸುತ್ತಿದ್ದು, ಹೊಸ ಮನೆ ನಿರ್ಮಿಸುತ್ತಿದ್ದರು. ಇದಕ್ಕಾಗಿ ಗುರುಮೂರ್ತಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು.

ತಾಯಿಯ ಜಮೀನು ಮಾರಾಟ ಮಾಡಿ ಹಣ ತರುವಂತೆ ಪತ್ನಿ (Wife) ವೀಣಾ, ಗುರುಮೂರ್ತಿ ಜೊತೆ ಪದೇ ಪದೇ ಜಗಳವಾಡುತ್ತಿದ್ದರು ಎನ್ನಲಾಗಿದೆ. ಈ ವಿಷಯವನ್ನು ಗುರುಮೂರ್ತಿ ತಾಯಿ ರೇಣುಕಮ್ಮ ಬಳಿ ಹೇಳಿದಾಗ ಸ್ವಲ್ಪ ಜಮೀನು ಮಾರಾಟ ಮಾಡಿ 25 ಲಕ್ಷ ರೂ. ಹಣ ನೀಡಿದ್ದರು. ಆದರೂ ವೀಣಾ ಬದಲಾಗಿರಲಿಲ್ಲ. ಇನ್ನೂ ಹೆಚ್ಚು ಹಣ ತರುವಂತೆ ಪತಿಯನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ.
ಮೇ 14 ರಂದು ಗುರುಮೂರ್ತಿ ಮೈಸೂರಿನ ತಾಯಿ ಮನೆಗೆ ತೆರಳಿದ್ದರು. ಈ ವೇಳೆ ಹೊಟ್ಟೆಗೆ ಬ್ಯಾಂಡೇಜ್ ಕಟ್ಟಿಕೊಂಡಿರುವುದನ್ನು ಗಮನಿಸಿದ ತಾಯಿ ರೇಣುಕಮ್ಮ ಮಗನನ್ನು ವಿಚಾರಿಸಿದ್ದರು. ಪತ್ನಿ ಹಾಗೂ ಅಪ್ರಾಪ್ತ ಪುತ್ರ ಹಲ್ಲೆ ನಡೆಸಿರುವುದಾಗಿ ಗುರುಮೂರ್ತಿ ತಾಯಿ ಬಳಿ ಹೇಳಿದ್ದರು. ಮೇ 15 ರಂದು ಗುರುಮೂರ್ತಿ ಹಾಸನಕ್ಕೆ ವಾಪಸ್ ಬಂದಿದ್ದು ಮೇ 18 ರಂದು ಮನೆಯಲ್ಲಿಯೇ ಮಲಗಿದ್ದ ಜಾಗದಲ್ಲಿ ಸಾವನ್ನಪ್ಪಿದ್ದರು.
ನಂತರ ವೀಣಾ ಅವರ ತನ್ನ ಅತ್ತೆಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ರೇಣುಕಮ್ಮ ಬಂದಿದ್ದರು. ಈ ವೇಳೆ ಪತಿ ಶವವನ್ನು ಸುಡಬೇಕೆಂದು ಸೊಸೆ ವೀಣಾ ಒತ್ತಾಯಿಸಿದ್ದರು. ಇದರಿಂದ ಅನುಮಾನಗೊಂಡ ರೇಣುಕಮ್ಮ ಹಾಗೂ ಸಂಬಂಧಿಕರು ಶವ ಸುಡುಲು ವಿರೋಧಿಸಿ ಬಿಟ್ಟಗೌಡನಹಳ್ಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ಅಂತ್ಯಕ್ರಿಯೆ ಬಳಿಕ ಗುರುಮೂರ್ತಿ ಮಾವ ಸದಾಶಿವ, ಮನೆಯಲ್ಲಿದ್ದ ಡಿವಿಆರ್‌ನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಪರಶೀಲನೆ ನಡೆಸಿದ ವೇಳೆ ಸಾವಿನ ಸತ್ಯ ಬಯಲಾಗಿದೆ. ಮೇ.17 ರಂದು ಪತಿ ಜೊತೆ ವೀಣಾ ಜಗಳ ತೆಗೆದಿದ್ದು ಅಪ್ರಾಪ್ತ ಪುತ್ರ ಹಾಗೂ ವೀಣಾ ಪತಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಗೊಳಗಾದ ಗುರುಮೂರ್ತಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದರು. ನಂತರ ಅಪ್ರಾಪ್ತ ಪುತ್ರ ತಂದೆಯನ್ನು ಮಂಚದ ಮೇಲೆ ಮಲಗಿಸಿದ್ದು, ಮೇ 18 ರಂದು ಗುರುಮೂರ್ತಿ ಸಾವನ್ನಪ್ಪಿದ್ದರು.
ಪತ್ನಿ ವೀಣಾ ಹಾಗೂ ಅಪ್ರಾಪ್ತ ಪುತ್ರನ ಹಲ್ಲೆಯಿಂದಲೇ ಮಗ ಮೃತಪಟ್ಟಿದ್ದಾನೆ. ಅಲ್ಲದೇ ಇನ್ಶೂರೆನ್ಸ್ ಹಣಕ್ಕಾಗಿ ಮೃತದೇಹವನ್ನು ಸುಡಲು ತಯಾರು ನಡೆಸಿದ್ದರು ಎಂದು ರೇಣುಕಮ್ಮ ಹಾಗೂ ಸದಾಶಿವ ಆರೋಪಿಸಿದ್ದಾರೆ. ಮೇ 25 ರಂದು ಪೊಲೀಸರಿಗೆ ದೂರು ನೀಡಿದ ಬಳಿಕ ಅತ್ತೆ ಮನೆಗೆ ಬಂದಿದ್ದ ವೀಣಾ ಹಾಗೂ ಆಕೆಯ ಸಹೋದರರು ಕೇಸ್ ವಾಪಾಸ್ ತೆಗೆದುಕೊಳ್ಳಿ, 25 ಲಕ್ಷ ರೂ. ಹಣ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿದೆ.
ವೀಣಾ ಹಾಗೂ ಅಪ್ರಾಪ್ತ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ – ಸಂಭ್ರಮಾಚರಣೆ ಮುಗಿಸಿ ಮನೆಗೆ ಬರ್ತಿದ್ದ RCB ಅಭಿಮಾನಿ ಸಾವು
