ಪಶ್ಚಿಮ ಬಂಗಾಳದಲ್ಲಿ (West Bengal) 15 ವರ್ಷಗಳ ಸುದೀರ್ಘ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಟಿಎಂಸಿಗೆ ಈ ಬಾರಿ ಜನ ಸೋಲಿನ ರುಚಿ ಉಣಿಸಿದ್ದಾರೆ. ಬಿಜೆಪಿಗೆ (BJP) ಐತಿಹಾಸಿಕ ಗೆಲುವು ತಂದುಕೊಟ್ಟಿದ್ದಾರೆ. ಎಸ್‌ಐಆರ್ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣಾ ಫಲಿತಾಂಶವು ರಾಜ್ಯ ರಾಜಕೀಯದ ಚಿತ್ರಣವನ್ನೇ ಬದಲಿಸಿದೆ. ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ದೀದಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ದೇಶದ ಇತಿಹಾಸದಲ್ಲೇ ನಡೆಯದ ಸನ್ನಿವೇಶಕ್ಕೆ ನಾಂದಿ ಹಾಡಿದ್ದರು. ಆದರೆ, ಸರ್ಕಾರದ ಅವಧಿ ಗುರುವಾರಕ್ಕೆ ಮುಗಿದ ಕಾರಣ, ಬಂಗಾಳದ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ವಿಧಾನಸಭೆಯನ್ನೇ ವಿಸರ್ಜಿಸಿದ್ದಾರೆ. ದೀದಿ ನಿರ್ಧಾರದಿಂದ ತಲೆದೋರಿದ್ದ ಸಾಂವಿಧಾನಿಕ ಬಿಕ್ಕಟ್ಟಿಗೆ ಇತಿಶ್ರೀ ಹಾಡಿದ್ದಾರೆ. ಅದಕ್ಕೂ ಬಗ್ಗದ ಬ್ಯಾನರ್ಜಿ ಹೋರಾಟ ಮುಂದುವರಿಸುವುದಾಗಿ ಪಣತೊಟ್ಟಿದ್ದಾರೆ. ಸೋಲಿನ ಬಳಿಕ ಮಮತಾ ಬ್ಯಾನರ್ಜಿ ಯಾಕೆ ಹೀಗೆ ವರ್ತಿಸಿದ್ರು? ದೇಶದ ರಾಜಕೀಯ ವ್ಯವಸ್ಥೆಗೆ ಏನು ಸಂದೇಶ ಕೊಡಲು ಹೊರಟಿದ್ದಾರೆಂಬ ಪ್ರಶ್ನೆ ಎದ್ದಿದೆ.
ವಿಧಾನಸಭಾ ಚುನಾವಣೆಯಲ್ಲಿ ಏನಾಯ್ತು?
ಎಸ್‌ಐಆರ್ ಬಳಿಕ ಪಶ್ಚಿಮ ಬಂಗಾಳಕ್ಕೆ ನಡೆದ ಮೊದಲ ವಿಧಾನಸಭಾ ಚುನಾವಣೆ ಇದು. ಸತತ 15 ವರ್ಷ ಆಡಳಿತ ನಡೆಸಿದ್ದ ದೀದಿ ಪಕ್ಷ ಟಿಎಂಕೆ ಚುನಾವಣೆಯಲ್ಲಿ ಸೋಲನುಭವಿಸಿದೆ. ಒಟ್ಟು 294 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದೆ. ಆದರೆ, ಆಡಳಿತಾರೂಢ ಟಿಎಂಸಿ 80 ಸ್ಥಾನಗಳಿಗೆ ಕುಸಿತ ಕಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಬಾನಿಪುರ ಸ್ಥಾನದಿಂದ ಸೋತಿದ್ದಾರೆ. ಕಾಂಗ್ರೆಸ್ ಎರಡು ಸ್ಥಾನಗಳನ್ನು ಜಯಿಸಿದೆ. ಟಿಎಂಸಿ ಬಂಡಾಯಗಾರ ಹುಮಾಯೂನ್ ಕಬೀರ್ ಅವರ ಆಮ್ ಜನತಾ ಉನ್ನಯನ್ ಪಕ್ಷ ಎರಡು ಸ್ಥಾನಗಳನ್ನು ಗೆದ್ದಿದೆ. ಸಿಪಿಐ(ಎಂ) ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ ತಲಾ ಒಂದು ಕ್ಷೇತ್ರದಲ್ಲಿ ಜಯಿಸಿವೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸೀಟ್‌ಗಳ ಬಹುಮತ ಬೇಕು. ಈ ಚುನಾವಣೆಯಲ್ಲಿ ಬಿಜೆಪಿ 207 ಅಂದರೆ, ಬಹುಮತಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವ ಹಕ್ಕನ್ನು ಪಡೆದುಕೊಂಡಿದೆ. ಇದನ್ನೂ ಓದಿ: ರಾಜೀನಾಮೆ ನೀಡದೇ ಹೈಡ್ರಾಮಾ – ಮಮತಾ ಸರ್ಕಾರವೇ ವಜಾ

ಹೈಡ್ರಾಮಾ ಏನು?
ಪ್ರಜಾಸತ್ತಾತ್ಮಕ ಸಂಪ್ರದಾಯದಂತೆ ವಿಧಾನಸಭಾ ಚುನಾವಣೆಯ ನಂತರ ನಿರ್ಗಮಿತ ಮುಖ್ಯಮಂತ್ರಿಗಳು ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ, ಚುನಾವಣೆಯಲ್ಲಿನ ಸೋಲನ್ನು ಒಪ್ಪಿಕೊಳ್ಳದ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದರು. ‘ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ. ನಾವು ಸೋತಿಲ್ಲ. ಹೀಗಾಗಿ, ನಾನು ರಾಜೀನಾಮೆ ನೀಡುವುದಿಲ್ಲ. ನಾನು ರಾಜಭವನಕ್ಕೆ ಭೇಟಿ ನೀಡುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ. ಮುಖ್ಯ ಚುನಾವಣಾ ಆಯುಕ್ತರು ಇದರಲ್ಲಿ ಪಾಲುದಾರರು’ ಎಂದೆಲ್ಲಾ ಬ್ಯಾನರ್ಜಿ ಗಂಭೀರ ಆರೋಪಗಳನ್ನು ಮಾಡಿದ್ದರು. ಸಿಎಂ ಅಧಿಕಾರ, ರಾಜೀನಾಮೆ ಬಗ್ಗೆ ಸಂವಿಧಾನವು ಏನು ಹೇಳುತ್ತದೆ? ತಾಂತ್ರಿಕ ಸಂದರ್ಭದಲ್ಲಿ ರಾಜ್ಯಪಾಲರಿಗೆ ಇರುವ ಅಧಿಕಾರ ಏನು? ವಿವರ ಇಲ್ಲಿದೆ.
ಸಂವಿಧಾನ ಏನು ಹೇಳುತ್ತದೆ?
ಭಾರತದ ಸಂವಿಧಾನವು ರಾಜ್ಯದ ಆಡಳಿತ ಮತ್ತು ಮುಖ್ಯಮಂತ್ರಿಯ ಅಧಿಕಾರಾವಧಿಯ ಬಗ್ಗೆ ಸ್ಪಷ್ಟ ನಿಯಮಗಳನ್ನು ಹೊಂದಿದೆ. ಸಂವಿಧಾನದ 164 ನೇ ವಿಧಿಯು, ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಇತರ ಮಂತ್ರಿಗಳನ್ನು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಸಚಿವರು ರಾಜ್ಯಪಾಲರ ಇಚ್ಛೆಯ ಸಮಯದಲ್ಲಿ ಅಧಿಕಾರದಲ್ಲಿರುತ್ತಾರೆ ಎಂದು ಹೇಳುತ್ತದೆ. ತಾಂತ್ರಿಕವಾಗಿ ಒಂದು ರಾಜ್ಯದ ರಾಜ್ಯಪಾಲರು ಮುಖ್ಯಮಂತ್ರಿಯನ್ನು ವಜಾಗೊಳಿಸಬಹುದು. ಆದಾಗ್ಯೂ, ಇದು ಅನಿಯಂತ್ರಿತ ವ್ಯಾಯಾಮವಾಗದಂತೆ ವಿವಿಧ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ. ರಾಜ್ಯಪಾಲರ ಅಧಿಕಾರವು ಪ್ರಾಥಮಿಕವಾಗಿ ಮಂತ್ರಿ ಮಂಡಳಿಯ ಸಹಾಯ ಮತ್ತು ಸಲಹೆಯಿಂದ ಚಲಾವಣೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು ವ್ಯಾಖ್ಯಾನಿಸಿವೆ.
ರಾಜ್ಯಪಾಲರ ಅಧಿಕಾರ ಏನು?
ರಾಜ್ಯಪಾಲರು ಒಬ್ಬ ಮುಖ್ಯಮಂತ್ರಿಯನ್ನು ರಾಜೀನಾಮೆ ನೀಡಲು ಕೇಳಿದರೆ ಮತ್ತು ವಿಧಾನಸಭೆಯ ಅಧಿಕಾರಾವಧಿ ಇರುವಾಗಲೇ ಆ ಹುದ್ದೆಗೆ ಮತ್ತೊಬ್ಬ ಅಭ್ಯರ್ಥಿಯನ್ನು ಆಹ್ವಾನಿಸಲು ಬಯಸಿದರೆ, ಪ್ರತಿಪಕ್ಷವು ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕು. ವಿಶ್ವಾಸಮತ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ (ಹಾಲಿ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರ ಬೆಂಬಲವನ್ನು ಹೊಂದಿರುವವರು). ಒಂದು ವೇಳೆ ಸ್ಥಿರ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ (ಆರ್ಟಿಕಲ್ 356) ಹೇರಬಹುದು.

ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿಕಾರವಧಿಯೂ ಮುಗಿದಿತ್ತು. ಈ ಸಂದರ್ಭದಲ್ಲಿ ಮಮತಾ ರಾಜೀನಾಮೆ ನೀಡಲು ನಿರಾಕರಿಸಿದ್ದರು, ಕೊನೆಗೆ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ವಿಧಾನಸಭೆ ವಜಾಗೊಳಿಸಿದರು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಸೋತ ಮುಖ್ಯಮಂತ್ರಿ ರಾಜೀನಾಮೆ ನೀಡಲೇಬೇಕೆಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ. ಹೊಸ ಸಿಎಂ ಪ್ರಮಾಣವಚನ ಸ್ವೀಕರಿಸುವವರೆಗೂ ನಿರ್ಗಮಿಸುವ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಹುದು ಅಷ್ಟೆ. ಆದರೆ ಈಗ ಸಿಎಂ ಸ್ಥಾನಕ್ಕೆ ಮಮತಾ ರಾಜೀನಾಮೆ ನೀಡಲಿಲ್ಲ. ಈ ನಿರ್ಧಾರ ಪ್ರಜಾಸತ್ತಾತ್ಮಕವಾಗಿ ಅಸಮಂಜಸ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಒಂದು ವೇಳೆ, ಸಿಎಂ ರಾಜೀನಾಮೆ ಕೊಡದಿದ್ದರೆ, ಶಾಸಕಾಂಗವನ್ನು ಅಮಾನತುಗೊಳಿಸುವುದು, ರಾಜ್ಯವನ್ನು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ತರುವುದು, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮೊದಲಾದ ಕ್ರಮಕೈಗೊಳ್ಳುವ ಅಧಿಕಾರವನ್ನು ರಾಜ್ಯಪಾಲರು ಹೊಂದಿರುತ್ತಾರೆ. ಈಗ ಅದೇ ಅಧಿಕಾರವನ್ನು ಬಳಸಿ ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ‘ಭಾರತ ಸಂವಿಧಾನದ 174ನೇ ವಿಧಿಯ ಷರತ್ತು (2)ರ ಉಪ-ಷರತ್ತು (ಬಿ) ಮೂಲಕ ನನಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ ನಾನು ಮೇ 7 ರಿಂದ ಜಾರಿಗೆ ಬರುವಂತೆ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿದ್ದೇನೆ’ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದಕ್ಕೆ ನನ್ನ ಪಿಎ ಹತ್ಯೆ: ಸುವೇಂದು ಅಧಿಕಾರಿ
ಕಾನೂನು ತಜ್ಞರು ಹೇಳೋದೇನು?
ಸಾಂವಿಧಾನಿಕ ಸ್ಥಾನವು ತುಲನಾತ್ಮಕವಾಗಿ ಸ್ಪಷ್ಟವಾಗಿದೆ. 174(2)(ಬಿ) ವಿಧಿಯ ಅಡಿಯಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ ನಂತರ, ಅದರ ಅಧಿಕಾರಾವಧಿ ಮತ್ತು ಅದರೊಂದಿಗೆ ಮಂತ್ರಿ ಮಂಡಳಿಯ ಸಾಂಸ್ಥಿಕ ಆಧಾರವು ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ಗಮಿತ ಮುಖ್ಯಮಂತ್ರಿಗಳು, ರಾಜ್ಯಪಾಲರ ಕೋರಿಕೆಯ ಮೇರೆಗೆ, ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೆ ಉಸ್ತುವಾರಿ ಸ್ಥಾನದಲ್ಲಿ ಮುಂದುವರಿಯಬಹುದು. ಆದಾಗ್ಯೂ, ಇದು ಜಾರಿಗೊಳಿಸಬಹುದಾದ ನಿಯಮಕ್ಕಿಂತ ಹೆಚ್ಚಾಗಿ ಸಾಂವಿಧಾನಿಕ ಸಂಪ್ರದಾಯದ ವಿಷಯವಾಗಿದೆ. ಈ ಪರಿವರ್ತನೆಯ ಹಂತವನ್ನು ನಿರ್ವಹಿಸುವಲ್ಲಿ ರಾಜ್ಯಪಾಲರು ಸ್ವಲ್ಪ ಮಟ್ಟಿಗೆ ವಿವೇಚನೆಯನ್ನು ಹೊಂದಿರುತ್ತಾರೆ. ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ಮಾತ್ರಕ್ಕೆ, ಸಾಂವಿಧಾನಿಕ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಆದ್ದರಿಂದ, ತಕ್ಷಣದ ಮುಂದಿನ ಹೆಜ್ಜೆ ಹೊಸ ವಿಧಾನಸಭೆಯನ್ನು ರಚಿಸುವುದು ಮತ್ತು ಹೊಸದಾಗಿ ಆಯ್ಕೆಯಾದ ಶಾಸಕರಲ್ಲಿ ಬಹುಮತ ಹೊಂದಿರುವ ನಾಯಕನನ್ನು ಸರ್ಕಾರ ರಚಿಸಲು ಆಹ್ವಾನಿಸುವುದಾಗಿದೆ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಸಾಂವಿಧಾನಿಕ ಕಾನೂನು ಕೇಂದ್ರವಾದ ಚರಖಾದ ಮುಖ್ಯಸ್ಥರಾದ ಸ್ವಪ್ನಿಲ್ ತ್ರಿಪಾಠಿ ತಿಳಿಸಿದ್ದಾರ.
ರಾಜ್ಯ ಸರ್ಕಾರದ ಅಧಿಕಾರವಧಿ ಹೇಗೆ?
ಸಂವಿಧಾನದ 172ನೇ ವಿಧಿಯ ಪ್ರಕಾರ, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಬೇಗನೆ ವಿಸರ್ಜಿಸಲ್ಪಡದ ಹೊರತು, ಅದರ ಮೊದಲ ಸಭೆಗೆ ನೇಮಿಸಲಾದ ದಿನಾಂಕದಿಂದ ಐದು ವರ್ಷಗಳವರೆಗೆ ಮುಂದುವರಿಯುತ್ತದೆ. ಈ ಅವಧಿ ಪೂರೈಸಿದ ಬಳಿಕ ಅಧಿಕಾರದಲ್ಲಿ ಮುಂದುವರಿಯುಂತಿಲ್ಲ. ಐದು ವರ್ಷಗಳ ಅವಧಿಯ ಮುಕ್ತಾಯದ ಬಳಿಕ ವಿಧಾನಸಭೆಯ ವಿಸರ್ಜನೆಯಾಗುತ್ತದೆ.

ಬಂಗಾಳದ ಅಧಿಕಾರವಧಿ ಮುಕ್ತಾಯ: ಚುನಾವಣಾ ಆಯೋಗದ ಪ್ರಕಾರ, ಪ್ರಸ್ತುತ ಬಂಗಾಳ ವಿಧಾನಸಭೆಯ ಅಧಿಕಾರಾವಧಿ 2021ರ ಮೇ 8 ರಿಂದ ಪ್ರಾರಂಭವಾಗಿ 2026ರ ಮೇ 7 ರಂದು ಮುಕ್ತಾಯಗೊಂಡಿದೆ. ಅದರ ನಂತರ ರಾಜ್ಯಪಾಲರು ಹೊಸ ವಿಧಾನಸಭೆ ರಚನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗುತ್ತದೆ. ಅಂದರೆ ಹೊಸ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕು. ಹೊಸ ಸರ್ಕಾರವನ್ನು ಆಯ್ಕೆ ಮಾಡಬೇಕಾಗುತ್ತದೆ.
ರಾಜೀನಾಮೆ ನಿರಾಕರಣೆ, ಇತಿಹಾಸದಲ್ಲೇ ಮೊದಲು!
ಚುನಾವಣೆಯಲ್ಲಿ ಸೋತ ಬಳಿಕ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡಲು ನಿರಾಕರಿಸಿರುವುದು ಇದೇ ಮೊದಲು. ಭಾರತದ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಸಂಗ ಈ ಹಿಂದೆ ನಡೆದಿರಲಿಲ್ಲ. ಅಧಿಕಾರವಧಿ ಮುಗಿದ ಬಳಿಕ ಸಿಎಂ ಗೌರವಯುತವಾಗಿ ರಾಜೀನಾಮೆ ನೀಡುವುದು ಸಂಪ್ರದಾಯ. ಇದು ಶಾಂತಿಯುತ ಅಧಿಕಾರ ವರ್ಗಾವಣೆಯ ಮೂಲತತ್ವ. ಇದನ್ನೂ ಓದಿ: ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುತ್ತಾ ಟಿವಿಕೆ? – ಬೊಮ್ಮಾಯಿ ಕೇಸ್‌ಗೂ ಸರ್ಕಾರ ರಚನೆಗೆ ಏನು ಸಂಬಂಧ?
ಮಮತಾ ಬ್ಯಾನರ್ಜಿಗೆ ಆಯ್ಕೆಗಳಿಲ್ಲ
ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಸಾಧಿಸುವ ವಿಷಯದಲ್ಲಿ, ಮಮತಾ ಬ್ಯಾನರ್ಜಿ ಅವರ ಬಳಿ ಈಗ ಯಾವುದೇ ಕಾರ್ಯಸಾಧ್ಯವಾದ ಆಯ್ಕೆಗಳಿಲ್ಲ. ಮುಖ್ಯಮಂತ್ರಿಗಳು ಚುನಾಯಿತ ಶಾಸಕರ ವಿಶ್ವಾಸದಿಂದ ಪ್ರಜಾಸತ್ತಾತ್ಮಕ ನ್ಯಾಯಸಮ್ಮತತೆಯನ್ನು ಪಡೆಯುತ್ತಾರೆ. ವಿಧಾನಸಭೆ ಅಸ್ತಿತ್ವದಲ್ಲಿಲ್ಲದ ನಂತರ, ಆ ಸಾಂಸ್ಥಿಕ ಅಡಿಪಾಯ ಕುಸಿಯುತ್ತದೆ. ಹೊಸ ಸರ್ಕಾರ ರಚನೆ ಆಗುವವರೆಗೆ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಉಸ್ತುವಾರಿ ಅವಕಾಶವನ್ನಷ್ಟೇ ಪಡೆಯುತ್ತಾರೆ. ಅದನ್ನು ಮೀರಿ ಯಾವುದೇ ನೇರ ಸಾಂವಿಧಾನಿಕ ಪರಿಹಾರ ಅವರಿಗಿಲ್ಲ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

