ಬೆಂಗಳೂರು: ರಾಜ್ಯಪಾಲರ ಭೇಟಿ ಬಳಿಕ ಡಿಕೆ ಶಿವಕುಮಾರ್ (DK Shivakumar) ಅಜ್ಜಯ್ಯನ ಮಠಕ್ಕೆ (Ajjaiah Mutt) ಭೇಟಿ ನೀಡಿ, ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಜ್ಜಯ್ಯ ಎಚ್ಚರಿಕೆ ನೀಡಿದ್ದು, ಕೆಲ ಸಲಹೆ ಕೂಡ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ರಾಜ್ಯಪಾಲರ ಭೇಟಿ ಬಳಿಕ ನೇರವಾಗಿ ನಾಗರಬಾವಿಯಲ್ಲಿರುವ (Nagarbavi) ಅಜ್ಜಯ್ಯನ ಶಾಖಾ ಮಠಕ್ಕೆ ಡಿಕೆಶಿ, ಪತ್ನಿ ಉಷಾ ಹಾಗೂ ಡಿಕೆ ಸುರೇಶ್ ಭೇಟಿ ನೀಡಿದ್ದಾರೆ. ಈ ವೇಳೆ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ: ಡಿಕೆಶಿಗೆ ಅಜ್ಜಯ್ಯ ಸೂಚನೆ
ಈ ವೇಳೆ ಅಜ್ಜಯ್ಯ ಕೆಲ ಸಲಹೆ ಹಾಗೂ ಎಚ್ಚರಿಕೆ ನೀಡಿದ್ದಾರೆ. ದೊಡ್ಡ ಮಟ್ಟಿಗಿನ ಸಂಭ್ರಮಾಚರಣೆ ಬೇಡ, ಯೋಚನೆ ಮಾಡಿ ತೀರ್ಮಾನಿಸಿ. ಮಳೆಗೆ ಪರಿಹಾರವಿದೆ, ಆದರೆ ಸಮಯ, ಸಂದರ್ಭದ ತೀರ್ಮಾನ ನಿಮ್ಮ ಕೈಯಲ್ಲಿದೆ ಎಂದು ಎಚ್ಚರಿಕೆ ನೀಡಿರುವುದು ಡಿಕೆಶಿಗೆ ಸ್ವಲ್ಪ ನಿರಾಸೆ ತಂದಿದೆ.
ಜೂ.3ರಂದು ಎರಡು ಸಮಯ ಚೆನ್ನಾಗಿದೆ. ಯಾವಾಗಾದರೂ ಮಾಡಬಹುದು. ವಿಧಾನಸೌಧದ ಗ್ರಾಂಡ್ ಸ್ಟೆಪ್ ಮೇಲೆ ಮಾಡಬೇಕಾ? ಬೇಡ್ವಾ? ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದ್ದಾರೆ ಎಂದು ಎನ್ನಲಾಗಿದೆ.
ಇತ್ತೀಚಿಗೆ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತನಾಡದಂತೆ ಡಿಕೆಶಿಗೆ ಎಚ್ಚರಿಕೆ ಕೊಟ್ಟಿದ್ದರು. ಮಾತಾಡಿದರೆ ಮುತ್ತು ಒಡೆದು ಹೋಗಲಿದೆ. ಅರ್ಥಾತ್ ಕೆಲಸ ಕೆಡಲಿದೆ ಎಂಬ ಸಂದೇಶವನ್ನು ನೀಡಿದ್ದರು.
ಇದಕ್ಕೂ ಮೊದಲು ದೆಹಲಿಗೆ ಹೋಗುವ ಮುನ್ನ ಡಿಸಿಎಂ ಡಿಕೆಶಿ ಒಂದೇ ದಿನ ಎರಡು ಬಾರಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಅಜ್ಜಯ್ಯನ ದರ್ಶನ ಪಡೆದು ಆಶೀರ್ವಾದ ಪಡೆದಿದ್ದರು. ಅಜ್ಜಯ್ಯನ ಅಪ್ಪಣೆ ಪಡೆಯದೇ ನಾನು ಯಾವ ಕೆಲಸವನ್ನೂ ಮಾಡಲ್ಲ ಎಂದು ಈ ಹಿಂದೆ ಡಿಕೆಶಿ ಹಲವು ಬಾರಿ ಹೇಳಿದ್ದರು.ಇದನ್ನೂ ಓದಿ: ಸಕಲ ದೋಷ ನೋಡಿಕೊಂಡು ಡಿಕೆಶಿ ಮುನ್ನಡೆಯಬೇಕಾಗುತ್ತೆ – ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ
