ನವದೆಹಲಿ: ಗಾಜಾದಲ್ಲಿ ಇಸ್ರೇಲ್ ನಡೆಸಿದ ಕ್ರಮವನ್ನು ‘ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ’ ಎಂದು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಕರೆದಿದ್ದಾರೆ. ಆದರೆ, ಪಾಕಿಸ್ತಾನದ ವಿಷಯದಲ್ಲಿ ಇದೇ ಮಾನದಂಡವನ್ನು ಅನ್ವಯಿಸಲು ನಿರಾಕರಿಸಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಿಸುವ ರಾಷ್ಟ್ರ ಎಂದು ಕರೆಯಲು ನಿರಾಕರಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಬ್ರಾಹಿಂ, ಗಾಜಾದಲ್ಲಿ ಹಮಾಸ್ ವಿರುದ್ಧದ ಇಸ್ರೇಲ್‌ನ ಕ್ರಮಗಳನ್ನು ಖಂಡಿಸಿದರು. ಆದರೆ, ಭಾರತದ ವಿರುದ್ಧ ಪಾಕಿಸ್ತಾನ ಅನುಸರಿಸುತ್ತಿರುವ ಭಯೋತ್ಪಾದನಾ ನೀತಿಯ ವಿಷಯ ಬಂದಾಗ ಅವರು ಉತ್ತರಿಸಲಾರದೆ ತಬ್ಬಿಬ್ಬಾದರು. ಇದನ್ನೂ ಓದಿ: BRICS Summit | ಭಯೋತ್ಪಾದನೆಯನ್ನು ಸಹಿಸಲಾಗದು – ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ನಾಯಕರು
ಬ್ರಿಕ್ಸ್ (BRICS) ಶೃಂಗಸಭೆಗಾಗಿ ಭಾರತದಲ್ಲಿರುವ ಇಬ್ರಾಹಿಂ, ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ವಸಾಹತುಶಾಹಿಯನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದರು.
ಹಮಾಸ್ ಕೇವಲ 20 ವರ್ಷಗಳಷ್ಟು ಹಳೆಯದು. ಆದರೆ ಪ್ಯಾಲೆಸ್ತೀನ್‌ನ ವಸಾಹತೀಕರಣವು 70 ವರ್ಷಗಳಷ್ಟು ಹಳೆಯದು. ಮಲೇಷ್ಯಾ ಮತ್ತು ಭಾರತದಲ್ಲಿರುವ ನಮಗೆ ವಸಾಹತೀಕರಣದ ಪರಿಚಯವಿದೆ. ಇಸ್ರೇಲ್‌ನಿಂದ ಪ್ಯಾಲೆಸ್ತೀನ್ ವಸಾಹತೀಕರಣಗೊಳ್ಳುವುದನ್ನು ನಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ಮಾತನಾಡಿದರು.
ನಿರಂತರ ಬಾಂಬ್ ದಾಳಿ ಮತ್ತು ಹತ್ಯೆಗಳು ಅಮಾನವೀಯವಾಗಿವೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕೃತ್ಯಗಳು ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆಯಾಗಿವೆ ಎಂದು ಬೇಸರ ಹೊರಹಾಕಿದರು. ಆದರೆ, ಕಳೆದ ವರ್ಷ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಕೃತ್ಯವನ್ನೂ ‘ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ’ ಎಂದು ಕರೆಯುತ್ತೀರಾ ಎಂದು ಕೇಳಿದಾಗ, ಇಬ್ರಾಹಿಂ ಹಾಗೆ ಹೇಳಲು ನಿರಾಕರಿಸಿದರು. ಇದನ್ನೂ ಓದಿ: ಜಾಗತಿಕ ಆಡಳಿತದಲ್ಲಿ ಸುಧಾರಣೆ ಅಗತ್ಯ: ಮೋದಿ
ನಾನು ಅಷ್ಟು ದೂರ ಹೋಗುವುದಿಲ್ಲ. ಭಾರತದಲ್ಲಿ ಹಾಗೆ ಹೇಳುವುದು ಬಹಳ ಸೂಕ್ಷ್ಮವಾದ ವಿಷಯವೆಂದು ನನಗೆ ತಿಳಿದಿದೆ. ನಾನು ಮೋದಿ ಅವರ ಆಪ್ತ ಸ್ನೇಹಿತ. ಹಾಗೆಯೇ ನಾವು ಪಾಕಿಸ್ತಾನಿಗಳೊಂದಿಗೂ ವ್ಯವಹರಿಸುತ್ತೇವೆ ಎಂದು ಪಾಕಿಸ್ತಾನವನ್ನು ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರ ಎಂದು ಕರೆಯಲು ನಿರಾಕರಿಸಿದರು.

