ಚಿಕ್ಕಬಳ್ಳಾಪುರ: ಜಮೀನಿನಲ್ಲಿದ್ದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಕೃಷಿ ಹೊಂಡದಲ್ಲಿ(Farm Pond) ಶವವಾಗಿ ಪತ್ತೆಯಾಗಿರುವ ಕರುಣಾಜನಕ ಘಟನೆ ಚಿಂತಾಮಣಿ(Chintamani) ತಾಲೂಕಿನ ಹುಸೇನಪುರ ಗ್ರಾಮದಲ್ಲಿ ನಡೆದಿದೆ.
ಹುಸೇನಪುರ ನಿವಾಸಿ ಮುನಿನಾರಾಯಣಪ್ಪ (60) ಹಾಗೂ ಅವರ ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ಮೃತಪಟ್ಟ ದುರ್ದೈವಿಗಳು. ಒಂದೇ ಕುಟುಂಬದ ಮೂವರು ಒಟ್ಟಿಗೆ ಜಲಸಮಾಧಿಯಾಗಿರುವುದು ಗ್ರಾಮದಲ್ಲಿ ತೀವ್ರ ಶೋಕದ ಛಾಯೆ ಮೂಡಿಸಿದೆ.
ಮುನಿನಾರಾಯಣಪ್ಪ ಅವರು ಪ್ರತಿ ಶನಿವಾರ ತಮ್ಮ ಜಮೀನಿನಲ್ಲಿರುವ ಆಂಜನೇಯಸ್ವಾಮಿ ಗುಡಿಗೆ(Anjaneya Swamy Gudi) ತೆರಳಿ ಪೂಜೆ ಸಲ್ಲಿಸುವುದನ್ನು ರೂಢಿಸಿಕೊಂಡಿದ್ದರು. ಶನಿವಾರ ಬೆಳಗ್ಗೆಯೂ ಪೂಜೆಗಾಗಿ ಜಮೀನಿಗೆ ಹೊರಟಾಗ, ಮೊಮ್ಮಕ್ಕಳಾದ ಯಶ್ವಿನ್ ಹಾಗೂ ಪ್ರಜ್ವಲ್ “ತಾತ, ನಾವೂ ನಿಮ್ಮ ಜೊತೆ ಬರುತ್ತೇವೆ” ಎಂದು ಹಠ ಹಿಡಿದು ಜೊತೆಯಲ್ಲೇ ತೆರಳಿದ್ದರು.
ಬೆಳಗ್ಗೆ 9 ರಿಂದ 10 ಗಂಟೆ ಸುಮಾರಿಗೆ ಮನೆಯಿಂದ ತೆರಳಿದ ಮೂವರೂ ಸಂಜೆಯಾದರೂ ವಾಪಸ್ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಜಮೀನಿನತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೇವಾಲಯದ ಸಮೀಪದಲ್ಲೇ ಇದ್ದ ಅಶ್ವತ್ಥಪ್ಪ ಎಂಬುವರ ಜಮೀನಿನ ಕೃಷಿ ಹೊಂಡದಲ್ಲಿ ಮೂವರ ಶವಗಳು ತೇಲುತ್ತಿರುವುದು ಕಂಡುಬಂದಿದೆ.
ತಾತ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಮಕ್ಕಳು ಆಟವಾಡುತ್ತಾ ಅಥವಾ ನೀರು ತರಲು ಕೃಷಿ ಹೊಂಡದ ಬಳಿ ಹೋಗಿ ಕಾಲುಜಾರಿ ಬಿದ್ದಿರಬಹುದು. ಮೊಮ್ಮಕ್ಕಳು ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಹೋದ ತಾತ ಮುನಿನಾರಾಯಣಪ್ಪ ಕೂಡ ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದೆ. ಕೃಷಿ ಹೊಂಡದ ಸಮೀಪ ವಿದ್ಯುತ್ ತಂತಿಗಳು ಹಾಗೂ ಪಂಪ್ಸೆಟ್ ಸಂಪರ್ಕವಿದ್ದು, ವಿದ್ಯುತ್ ಸ್ಪರ್ಶದಿಂದ ಅವಘಡ ಸಂಭವಿಸಿರಬಹುದೇ ಎಂಬ ಸಂಶಯವನ್ನೂ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ಮೃತ ಯಶ್ವಿನ್ ಮುನಿನಾರಾಯಣಪ್ಪ ಅವರ ಪುತ್ರ ನಂದೀಶ್ ಅವರ ಮಗನಾಗಿದ್ದರೆ, ಪ್ರಜ್ವಲ್ ಮುನಿನಾರಾಯಣಪ್ಪ ಅವರ ಸಹೋದರ ವೆಂಕಟರೋಣಪ್ಪ ಅವರ ಪುತ್ರ ನಾರಾಯಣಸ್ವಾಮಿ ಅವರ ಮಗನೆಂದು ತಿಳಿದುಬಂದಿದೆ. ಮುದ್ದಿನ ಮೊಮ್ಮಕ್ಕಳೊಂದಿಗೆ ನಗುನಗುತ್ತಾ ಮನೆಯಿಂದ ತೆರಳಿದ್ದ ತಾತ ಶವವಾಗಿ ಮರಳಿದ್ದನ್ನು ಕಂಡು ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿತ್ತು.
ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಹೊರತೆಗೆದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

