ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (AAP) ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರೆಯಾಗಿದ್ದ ಪ್ರಿಯಾಂಕಾ ಕಕ್ಕರ್(Priyanka Kakkar) ಶನಿವಾರ ಎಎಪಿಯೊಂದಿಗಿನ ತಮ್ಮ ದಶಕದ ಒಡನಾಟವನ್ನು ಕೊನೆಗೊಳಿಸಿ ಕಾಂಗ್ರೆಸ್(Congress) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ರಾಜೀವ್ ಶುಕ್ಲಾ, ಪವನ್ ಖೇರಾ ಮತ್ತು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಅವರ ಸಮ್ಮುಖದಲ್ಲಿ ಪ್ರಿಯಾಂಕಾ ಕಕ್ಕರ್ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾಜಿ ಶಾಸಕ ಶ್ಯಾಮ್ ಸುಂದರ್ ಶರ್ಮಾ ಹಾಗೂ ಪತ್ರಕರ್ತ ರಜತ್ ರಾಕೇಶ್ ಟಂಡನ್ ಕೂಡ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಪ್ರಿಯಾಂಕಾ ಕಕ್ಕರ್, ಎಎಪಿಯ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ಹೊರಹಾಕಿದರು. ನಾನು ಬೆಳೆದು ದೊಡ್ಡವಳಾದ ಹಸಿರಾದ, ಸ್ವಚ್ಛವಾದ, ಪ್ರಗತಿಪರ ಹಾಗೂ ಸುರಕ್ಷಿತ ದೆಹಲಿಯನ್ನು ಮರಳಿ ತರಲು ಅಪಾರ ಹೆಮ್ಮೆಯಿಂದ ಇಂದು ಕಾಂಗ್ರೆಸ್ ಸೇರುತ್ತಿದ್ದೇನೆ. ಭಾರತೀಯ ರಾಜಕೀಯದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದ ಅನುಭವದ ಬಳಿಕ, ಕಾಂಗ್ರೆಸ್ ಮಾತ್ರವೇ ಇದನ್ನು ಸಾಧಿಸಲು ಸಾಧ್ಯ ಎಂದು ನಾನು ದೃಢವಾಗಿ ನಂಬಿದ್ದೇನೆ. ದೇಶದಲ್ಲಿ ಒಬ್ಬ ನೈಜ ಹಾಗೂ ಬದ್ಧತೆಯುಳ್ಳ ನಾಯಕನಿದ್ದರೆ ಅದು ರಾಹುಲ್ ಗಾಂಧಿ ಮಾತ್ರ ಎಂದು ಹೇಳಿದರು. ಇದನ್ನೂ ಓದಿ: ‘ವೋಟ್ ಚೋರಿ’ ವಿವಾದದ ಮಧ್ಯೆ ʻಕ್ರೆಡಿಟ್ ಚೋರಿʼ ಕದನ; ಕಾಂಗ್ರೆಸ್–ಜಿರಳೆ ಬೆಂಬಲಿಗರ ನಡುವೆ ಸೋಷಿಯಲ್ ಮೀಡಿಯಾ ವಾರ್!
VIDEO | Delhi: AAP national spokesperson Priyanka Kakkar joins Congress, says, “If there is one leader who is not afraid to promote his ideas, it is Rahul Gandhi. I observed that he is the only leader who has not shed tears for the cameras. He is the only leader today who has not… pic.twitter.com/UH5ZVljfD1
— Press Trust of India (@PTI_News) October 3, 2026
ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಮತಗಳು ಚದುರಿಹೋಗದಂತೆ ತಡೆದು, ಬಿಜೆಪಿಯ ಹಿಮ್ಮುಖ ರಾಜಕಾರಣವನ್ನು ಹಿಮ್ಮೆಟ್ಟಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಎಎಪಿಯ ಹೊಸ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, “ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಏಕೈಕ ದಾರಿ ಕಾಂಗ್ರೆಸ್‌ನದ್ದಾಗಿದೆ. ಹೀಗಾಗಿ ಎಲ್ಲರೂ ಈ ಮಾರ್ಗಕ್ಕೆ ಬರುತ್ತಿದ್ದಾರೆ” ಎಂದು ಹೇಳಿದರಲ್ಲದೆ, ಪಂಜಾಬ್‌ನಲ್ಲಿ ಎಎಪಿ ದಿನದಿಂದ ದಿನಕ್ಕೆ ರಾಜಕೀಯವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರಿಯಾಂಕಾ ಕಕ್ಕರ್ ರಾಜೀನಾಮೆ ಆಶ್ಚರ್ಯ ತಂದಿಲ್ಲ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ (Aravind Kejriwal) ಅವರ ಒಡನಾಟ ಹೊಂದಿದ್ದ ಕಿರಣ್ ಬೇಡಿ, ಅಂಜಲಿ ದಮಾನಿಯಾ, ಮಧು ಭಾಧುರಿ, ಶಾಜಿಯಾ ಇಲ್ಮಿ, ರಿಚಾ ಪಾಂಡೆ, ಸ್ವಾತಿ ಮಲಿವಾಲ್ ಮತ್ತು ಈಗ ಪ್ರಿಯಾಂಕಾ ಕಕ್ಕರ್ ಸೇರಿದಂತೆ ಪ್ರಮುಖ ಮಹಿಳಾ ನಾಯಕಿಯರು ಪಕ್ಷವನ್ನು ಏಕೆ ತೊರೆದರು ಎಂಬುದಕ್ಕೆ ಕೇಜ್ರಿವಾಲ್ ಉತ್ತರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಯಾರು ಈ ಪ್ರಿಯಾಂಕಾ ಕಕ್ಕರ್?
2013ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಪ್ರಿಯಾಂಕಾ ಕಕ್ಕರ್, ಟಿವಿ ಚರ್ಚೆಗಳು ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಎಎಪಿಯ ಪ್ರಮುಖ ರಾಷ್ಟ್ರೀಯ ಧ್ವನಿಯಾಗಿ ಗುರುತಿಸಿಕೊಂಡಿದ್ದರು. 2017 ರಿಂದ 2019 ರವರೆಗೆ ತೆಲಂಗಾಣದ ಪಕ್ಷದ ವೀಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದ ಕಾನೂನು ಘಟಕದ ಮುಖ್ಯಸ್ಥೆಯಾಗಿ ಜವಾಬ್ದಾರಿ ನಿಭಾಯಿಸಿದ್ದರು. 2023ರಲ್ಲಿ ಎಎಪಿಯ ರಾಷ್ಟ್ರೀಯ ಮುಖ್ಯ ವಕ್ತಾರೆಯಾಗಿ ನೇಮಕಗೊಂಡಿದ್ದ ಅವರು, ಉತ್ತರ ಪ್ರದೇಶದ ಕಾನೂನು ವೀಕ್ಷಕಿಯಾಗಿ ಹಾಗೂ 12 ಸದಸ್ಯರ ಮೇಲ್ವಿಚಾರಣಾ ಸಮಿತಿಯ ಭಾಗವಾಗಿಯೂ ಕಾರ್ಯನಿರ್ವಹಿಸಿದ್ದರು.

