– ಲಾಡ್ಲೆ ಮಶಾಕ್ ದರ್ಗಾ ಗಲಭೆ ಸೇರಿದಂತೆ 52 ಕೇಸ್
– ಕ್ರಿಮಿನಲ್ ಕೇಸ್ ರದ್ದು ತೀರ್ಮಾನಕ್ಕೆ ಬ್ರೇಕ್
ಬೆಂಗಳೂರು: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ(Aland Ladle Mashak Dargah) ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್ ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ (High Court) ತಡೆ ನೀಡಿದೆ.
ಸಚಿವ ಸಂಪುಟದ ಈ ನಿರ್ಧಾರವನ್ನು ಗಿರೀಶ್ ಭರದ್ವಾಜ್(Girish Bharadwaj) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿ ತೀವ್ರವಾಗಿ ಆಕ್ಷೇಪಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು, ರಾಜ್ಯದ ಮೂವರು ಹಿರಿಯ ಸಚಿವರ ನೇರ ಶಿಫಾರಸಿನ ಮೇರೆಗೆ ನಿಯಮಗಳನ್ನು ಗಾಳಿಗೆ ತೂರಿ ಈ ಕೇಸ್‌ಗಳನ್ನು ಕೈಬಿಡಲಾಗಿದೆ. ಹೂಡಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯುವ ಸರ್ಕಾರದ ಈ ನಿಲುವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025 ರಲ್ಲಿ ಹೈಕೋರ್ಟ್ ನೀಡಿದ್ದ ಕಟ್ಟುನಿಟ್ಟಿನ ಆದೇಶಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಇದು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದ ತೀರ್ಮಾನ ಎಂದು ವಾದಿಸಿದ್ದರು. ಇದನ್ನೂ ಓದಿ: ಹಿಂದೂ ವಿವಾಹಕ್ಕೆ ನೋಂದಣಿ ಸಾಕಾಗಲ್ಲ, ಸಪ್ತಪದಿ ಸೇರಿ ಧಾರ್ಮಿಕ ವಿಧಿವಿಧಾನ ಕಡ್ಡಾಯ: ಗುಜರಾತ್ ಹೈಕೋರ್ಟ್

ಏನಿದು ಆಳಂದ ದರ್ಗಾ ಗಲಭೆ ಪ್ರಕರಣ?
2022ರ ಮಹಾ ಶಿವರಾತ್ರಿಯಂದು(Maha Shivaratri) ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿದ್ದ ರಾಘವ ಚೈತನ್ಯ ಶಿವಲಿಂಗಕ್ಕೆ ಕಿಡಿಗೇಡಿಗಳು ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಜಾಗವನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಶಾಸಕರು ಹಾಗೂ ಭದ್ರತೆಯ ಉಸ್ತುವಾರಿ ಹೊತ್ತಿದ್ದ ಡಿಸಿ ಮತ್ತು ಎಸ್‌ಪಿ ಅವರ ಕಾರುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಲಾಗಿತ್ತು.
ಈ ಗಲಭೆಗೆ ಸಂಬಂಧಿಸಿದಂತೆ ವಿವಿಧ ಮುಸ್ಲಿಂ ಮುಖಂಡರು ಮತ್ತು ಯುವಕರ ಮೇಲೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದವು. ಅಂದಿನ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರ ಲಿಖಿತ ಮನವಿಯ ಮೇರೆಗೆ ಸರ್ಕಾರ ಈ ಎಲ್ಲಾ ಕೇಸ್‌ಗಳನ್ನು 2026 ಮೇ 27ರ ರಂದು ವಾಪಸ್ ಪಡೆದಿತ್ತು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಒಂದು ಪ್ರಯೋಗ – ಮಾಧ್ಯಮ ವರದಿಗಳನ್ನು ನಿರಾಕರಿಸಿದ ಕೇಂದ್ರ ಸರ್ಕಾರ
Girish Bharadwaj Vs State of Karnataka
The Karnataka High Court has stayed the Karnataka Government’s Cabinet decision to withdraw 52 criminal cases, including the Alanda riots case. The Hon. High Court has prima facie found fault with the State’s invocation of Section 321 CrPC…
— Girish Bharadwaj (@Girishvhp) July 2, 2026
ಮುಂದೇನು?
ಸರ್ಕಾರದ ಈ ಆದೇಶದಿಂದಾಗಿ ಕೋಮು ಗಲಭೆಯ ಆರೋಪಿಗಳು, ಕೆಲವು ರಾಜಕಾರಣಿಗಳು, ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿತ್ತು. ಆದರೆ ಹೈಕೋರ್ಟ್ ಈಗ ನೀಡಿರುವ ತಡೆಯಾಜ್ಞೆಯಿಂದಾಗಿ ಎಲ್ಲಾ 52 ಕ್ರಿಮಿನಲ್ ಪ್ರಕರಣಗಳ ಕಾನೂನು ಪ್ರಕ್ರಿಯೆಗಳು ಹಾಗೂ ನ್ಯಾಯಾಲಯದ ವಿಚಾರಣೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಮುಂಬರುವ ದಿನಗಳಲ್ಲಿ ಸರ್ಕಾರದ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
