ಗಾಂಧಿನಗರ: ಹಿಂದೂ ವಿವಾಹಕ್ಕೆ ಕೇವಲ ವಿವಾಹ ನೋಂದಣಿ ಪ್ರಮಾಣಪತ್ರವಿದ್ದರೆ(Marriage Certificate) ಸಾಕಾಗುವುದಿಲ್ಲ. ಸಪ್ತಪದಿ ಸೇರಿದಂತೆ ಅಗತ್ಯ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದರೆ ಮಾತ್ರ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ಸಿಗುತ್ತದೆ ಎಂದು ಗುಜರಾತ್ ಹೈಕೋರ್ಟ್(Gujarat High Court) ಮಹತ್ವದ ತೀರ್ಪು ನೀಡಿದೆ.
ಬ್ರಿಟನ್‌ನಲ್ಲಿ(Britain) ನೆಲೆಸಿರುವ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ವಿವಾಹವನ್ನು ಅಮಾನ್ಯ ಎಂದು ಘೋಷಿಸುವಂತೆ ಸಲ್ಲಿಸಿದ್ದ ಮೇಲ್ಮನವಿಯನ್ನ ವಿಚಾರಿಸಿದ ನ್ಯಾಯಮೂರ್ತಿಗಳಾದ ಇಲೇಶ್ ಜೆ. ವೋರಾ ಮತ್ತು ಆರ್.ಟಿ. ವಚಾನಿ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ವೇಳೆ, ಪ್ರತಿವಾದಿ ಮಹಿಳೆ ಸ್ವತಃ ನ್ಯಾಯಾಲಯದ ಮುಂದೆ ಯಾವುದೇ ವಿವಾಹ ವಿಧಿವಿಧಾನಗಳು ನಡೆದಿಲ್ಲ ಎಂದು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇವಲ ವಿವಾಹ ನೋಂದಣಿ ಪ್ರಮಾಣಪತ್ರದ ಆಧಾರದ ಮೇಲೆ ವಿವಾಹ ಮಾನ್ಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಲಯವು ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 7 ಅನ್ನು ಉಲ್ಲೇಖಿಸಿದ್ದು, ಹಿಂದೂ ವಿವಾಹವು ಆಯಾ ಕುಟುಂಬ ಅಥವಾ ಸಮುದಾಯದ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಬೇಕು ಎಂದು ತಿಳಿಸಿದೆ. ವಿಶೇಷವಾಗಿ ಸಪ್ತಪದಿ ಸೇರಿದಂತೆ ಅಗತ್ಯ ಆಚರಣೆಗಳು ನಡೆದಾಗ ಮಾತ್ರ ವಿವಾಹಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಕಾನೂನುಬದ್ಧ ಮಾನ್ಯತೆ ದೊರೆಯುತ್ತದೆ ಎಂದು ಹೇಳಿದೆ.
ತೀರ್ಪಿನಲ್ಲಿ ನ್ಯಾಯಾಲಯ ಮಹತ್ವದ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ. “ವಿವಾಹ ಎನ್ನುವುದು ಕೇವಲ ಸಂಭ್ರಮಾಚರಣೆ ಅಥವಾ ಆಚರಣೆಯ ಕಾರ್ಯಕ್ರಮವಲ್ಲ. ಅದು ಪವಿತ್ರ ಸಂಸ್ಕಾರ ಮತ್ತು ಜೀವಮಾನದ ಬಾಂಧವ್ಯವಾಗಿದೆ. ಯುವಜನರು ವಿವಾಹದ ಪಾವಿತ್ರ‍್ಯ ಹಾಗೂ ಅದರ ಜವಾಬ್ದಾರಿಯನ್ನು ಅರಿತು ವೈವಾಹಿಕ ಜೀವನಕ್ಕೆ ಕಾಲಿಡಬೇಕು” ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ
ಯುಕೆಯಲ್ಲಿ ವಾಸಿಸುತ್ತಿರುವ ಕೌಶಲ್ ಸೋನಾರ್ ಅವರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ವಿವಾಹವನ್ನು ಅಮಾನ್ಯ ಎಂದು ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಅಹಮದಾಬಾದ್‌ನಲ್ಲಿ ವಾಸಿಸುವ ಮಹಿಳೆ ವಿವಾಹ ಪ್ರಮಾಣಪತ್ರದೊಂದಿಗೆ ಅವರ ಕುಟುಂಬವನ್ನು ಸಂಪರ್ಕಿಸಿದ ಬಳಿಕವೇ ಈ ವಿವಾಹದ ಬಗ್ಗೆ ತನಗೆ ತಿಳಿಯಿತು ಎಂದು ಅರ್ಜಿದಾರರು ತಿಳಿಸಿದ್ದಾರೆ.ಇದನ್ನೂ ಓದಿ: ನಕಲಿ ಖಾತೆ, ವಂಚನೆ ಆತಂಕ – ವಾಟ್ಸಪ್ ಹೊಸ ವೈಶಿಷ್ಟ್ಯದ ಮೇಲೆ ಕೇಂದ್ರ ಹದ್ದಿನ ಕಣ್ಣು
ಪ್ರತಿವಾದಿ ಮಹಿಳೆಯೊಂದಿಗೆ ಯಾವುದೇ ಹಿಂದೂ ವಿವಾಹ ವಿಧಿವಿಧಾನಗಳು ನಡೆದಿಲ್ಲ. ನಾವೆಂದಿಗೂ ಎಂದಿಗೂ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸಿಲ್ಲ. ಅಲ್ಲದೆ, ವಿವಾಹ ದಾಖಲೆಗಳಲ್ಲಿ ತಮ್ಮ ಸಹಿಯನ್ನು ತಮ್ಮ ಅನುಮತಿಯಿಲ್ಲದೆ ವಂಚನೆಯ ಮೂಲಕ ಪಡೆದಿದ್ದಾರೆ ಎಂದು ಕೌಶಲ್ ಸೋನಾರ್ ಆರೋಪಿಸಿದ್ದರು.
ಈ ವೇಳೆ ಪ್ರತಿವಾದಿ ಮಹಿಳೆಯೂ ಕೌಟುಂಬಿಕ ನ್ಯಾಯಾಲಯದ ಮುಂದೆ ಯಾವುದೇ ವಿವಾಹ ವಿಧಿವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಎಂದಿಗೂ ಜೀವನ ನಡೆಸಿಲ್ಲ ಎಂದು ಒಪ್ಪಿಕೊಂಡಿದ್ದರು. ಈ ಒಪ್ಪಿಗೆಯಿದ್ದರೂ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಈ ನಡೆಯನ್ನು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ವಿವಾಹವನ್ನು ಅಮಾನ್ಯ ಎಂದು ಘೋಷಿಸಿ ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.ಇದನ್ನೂ ಓದಿ: ಜುಲೈ 20ರಿಂದ ಸಂಸತ್ ಮುಂಗಾರು ಅಧಿವೇಶನ ಸಾಧ್ಯತೆ
