ನವದೆಹಲಿ: ಮೊಬೈಲ್ (Mobile) ಸಂಖ್ಯೆ ಹಂಚಿಕೊಳ್ಳದೇ ಕೇವಲ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುವ ವಾಟ್ಸಪ್‌ನ ಹೊಸ ವೈಶಿಷ್ಟ್ಯದ ಬಗ್ಗೆ ಕೇಂದ್ರ ಸರ್ಕಾರ (Central Govt) ಗಂಭೀರ ಪರಿಶೀಲನೆ ಆರಂಭಿಸಿದೆ.
ಈ ಹೊಸ ವ್ಯವಸ್ಥೆಯಿಂದ ನಕಲಿ ಖಾತೆಗಳನ್ನ (Fake Account) ಸೃಷ್ಟಿಸುವುದು, ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ವಂಚನೆ ನಡೆಸುವುದು ಹಾಗೂ ಸೈಬರ್ ಅಪರಾಧಗಳಿಗೆ ಅವಕಾಶ ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಕಾನೂನುಬದ್ಧ ನಿಯಂತ್ರಣದ ಆಯ್ಕೆಗಳನ್ನೂ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಿ – ಏನಿದು ಹೊಸ ವಾಟ್ಸಪ್ ಅಪ್‌ಡೇಟ್?

ಮೂಲಗಳ ಪ್ರಕಾರ, ಯೂಸರ್‌ನೇಮ್ (Username) ವ್ಯವಸ್ಥೆ ಜಾರಿಯಾದರೆ ಯಾರಾದರೂ ಮತ್ತೊಬ್ಬರ ಹೆಸರಿನಂತೆಯೇ ಕಾಣುವ ಖಾತೆಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನ ದಾರಿ ತಪ್ಪಿಸುವ ಸಾಧ್ಯತೆ ಇದೆ. ಇದರಿಂದ ಗುರುತಿನ ಕಳವು, ಹಣಕಾಸು ವಂಚನೆ ಹಾಗೂ ಸೈಬರ್ ಮೋಸ ಪ್ರಕರಣಗಳು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ಈ ಬೆಳವಣಿಗೆಯ ನಡುವೆ ಕೇಂದ್ರ ಸರ್ಕಾರ, ಹೊಸ ವೈಶಿಷ್ಟ್ಯಗಳಿಂದ ವಂಚನೆಗೆ ಅವಕಾಶ ಸೃಷ್ಟಿಯಾದರೆ ಅದರ ಹೊಣೆಗಾರಿಕೆ ಸಂಬಂಧಿತ ಸಂದೇಶ ವಿನಿಮಯ ವೇದಿಕೆಗಳೇ ಹೊರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಒಂದು ಪ್ರಯೋಗ – ಮಾಧ್ಯಮ ವರದಿಗಳನ್ನು ನಿರಾಕರಿಸಿದ ಕೇಂದ್ರ ಸರ್ಕಾರ

ವಾಟ್ಸಪ್‌ನ ಈ ಹೊಸ ವ್ಯವಸ್ಥೆಯ ಉದ್ದೇಶ ಬಳಕೆದಾರರ ಗೌಪ್ಯತೆ ಹೆಚ್ಚಿಸುವುದಾಗಿದೆ. ಮುಂದಿನ ದಿನಗಳಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಬಹಿರಂಗಪಡಿಸದೇ, ಆಯ್ಕೆ ಮಾಡಿಕೊಂಡ ಯೂಸರ್‌ನೇಮ್ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಆದರೆ ಈ ವೈಶಿಷ್ಟ್ಯ ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ಅಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳುವುದು ಕಂಪನಿಯ ಜವಾಬ್ದಾರಿಯಾಗಿದೆ ಎಂದು ಸರ್ಕಾರ ಒತ್ತಿ ಹೇಳಿದೆ.
