ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪೆಟ್ರೋಲ್‌ಗೆ ಎಥೆನಾಲ್(Ethanol) ಮಿಶ್ರಣ ಕೇವಲ ಒಂದು ಪ್ರಯೋಗ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ಭಾರತದ ಅಟಾರ್ನಿ ಜನರಲ್ ಕಚೇರಿ(Attorney General Office) ಸ್ಪಷ್ಟಪಡಿಸಿದೆ.
ಎಥೆನಾಲ್ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ತೈಲ ಮಾರುಕಟ್ಟೆ ಕಂಪನಿಗಳು (BPCL) ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ (SLP) ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಅವರು ಮಂಡಿಸಿದ ವಾದವನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ, “ಸರ್ಕಾರದ E20 ಕಾರ್ಯಕ್ರಮವು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಮತ್ತು ಮುಂದಿನ ವರ್ಷದ ವೇಳೆಗೆ ಇದರ ಪ್ರಭಾವ ಸ್ಪಷ್ಟವಾಗಲಿದೆ” ಎಂದು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಅಧಿಕೃತ ಪ್ರಕಟಣೆಯ ಮೂಲಕ ಈ ಸ್ಪಷ್ಟೀಕರಣ ನೀಡಿದೆ.

ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಅವರು, ಎಥೆನಾಲ್ ಪ್ಲಾಂಟ್‌ಗಳಿಗೆ ಎಥನಾಲ್ ಹಂಚಿಕೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇಂತಹುದೇ ಹಲವು ರಿಟ್ ಅರ್ಜಿಗಳು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇವೆ. ಎಲ್ಲಾ ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಮಾಂತರ ವಿಚಾರಣೆಗಳು ನಡೆದು ಭಿನ್ನ ತೀರ್ಪುಗಳು ಬರುವುದನ್ನು ತಪ್ಪಿಸಲು ಈ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೇ ವರ್ಗಾಯಿಸಲು ಕೋರಲಾಗುವುದು ಎಂದು ತಿಳಿಸಿದ್ದರು.
ರಾಷ್ಟ್ರೀಯ ಕಾರ್ಯಕ್ರಮವಾದ ಎಥನಾಲ್ ಮಿಶ್ರಣ ಯೋಜನೆಗೆ ಯಾವುದೇ ಧಕ್ಕೆಯಾಗದಂತೆ ತೈಲ ಕಂಪನಿಗಳಿಗೆ ನಿರಂತರವಾಗಿ ಎಥೆನಾಲ್ ಪೂರೈಕೆಯಾಗಲು ಈ ಕಾನೂನು ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಅವರು ಕೋರ್ಟ್ ಗಮನಕ್ಕೆ ತಂದಿದ್ದರು. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಎಥನಾಲ್ ಪೂರೈಕೆ ವರ್ಷಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
ನ್ಯಾಯಾಲಯದ ಯಾವುದೇ ಹಂತದ ವಿಚಾರಣೆಯಲ್ಲೂ ಸರ್ಕಾರ ಈ ಯೋಜನೆಯನ್ನು ಪ್ರಯೋಗ ಎಂದು ಕರೆದಿಲ್ಲ. ಪ್ರಮುಖ ರಾಷ್ಟ್ರೀಯ ನೀತಿಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪ ವರದಿ ಮಾಡುವಾಗ ಮಾಧ್ಯಮಗಳು ಹೆಚ್ಚಿನ ನಿಖರತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಅಟಾರ್ನಿ ಜನರಲ್ ಕಚೇರಿ ಮನವಿ ಮಾಡಿದೆ.
