ನವದೆಹಲಿ: ಎಥೆನಾಲ್(Ethanol) ಮಿಶ್ರಣವು ಪ್ರಸ್ತುತ ಒಂದು ಪ್ರಯೋಗದ ಹಂತದಲ್ಲಿದೆ ಮತ್ತು ಇದರ ಸಂಪೂರ್ಣ ಹಾಗೂ ನಿಖರ ಫಲಿತಾಂಶಗಳು ಮುಂದಿನ ವರ್ಷದೊಳಗೆ ಹೊರಬರಲಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಎಥೆನಾಲ್ ಮಿಶ್ರಣ ಕಾರ್ಯಕ್ರಮವು ನಡೆಯುತ್ತಿರುವ ಪ್ರಯೋಗವಾಗಿದ್ದು, ಮುಂದಿನ ವರ್ಷದ ವೇಳೆಗೆ ನೀತಿಯ ಪರಿಣಾಮವು ಸ್ಪಷ್ಟವಾಗುತ್ತದೆ ತಿಳಿಸಿದರು.
ಏನಿದು ಪ್ರಕರಣ?
2025-26ರ ಎಥೆನಾಲ್ ಪೂರೈಕೆ ವರ್ಷಕ್ಕೆ (ESY) ಸಂಬಂಧಿಸಿದಂತೆ, ಖಾಸಗಿ ಡಿಸ್ಟಿಲರಿ ಸಂಸ್ಥೆಯಾದ ವಿಐಎನ್‌ಪಿ ಡಿಸ್ಟಿಲರೀಸ್ (VINP Distilleries) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್ (Karnataka High Court) ತೈಲ ಮಾರಾಟ ಕಂಪನಿಗಳು (OMCs) ಆ ಸಂಸ್ಥೆಗೆ ಹೆಚ್ಚಿನ ಎಥೆನಾಲ್ ಕೋಟಾ ಹಂಚಿಕೆ ಮಾಡುವಂತೆ ಮರುಪರಿಶೀಲಿಸಲು ಆದೇಶಿಸಿತ್ತು. ಈ ಆದೇಶವನ್ನು ಭಾರತೀಯ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಪ್ರಶ್ನಿಸಿತ್ತು.
ಇಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರಿದ್ದ ರಜಾಕಾಲದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ , ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಪ್ರಸ್ತುತ ಎಥನಾಲ್ ಹಂಚಿಕೆ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಜೊತೆಗೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಡಿಸ್ಟಿಲರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾದ್ರೆ, ವಿಮಾ ಕಂಪನಿ ನಷ್ಟ ಭರಿಸುತ್ತದೆಯೇ?

ಖಾಸಗಿ ಕಂಪನಿಯ ವಾದ ಏನಿತ್ತು?
ನಾವು ವಾರ್ಷಿಕವಾಗಿ ಸುಮಾರು 9.90 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದೇವೆ. 2025-26 ಎಥೆನಾಲ್ ಪೂರೈಕೆ ವರ್ಷ 9.26 ಕೋಟಿ ಲೀಟರ್ ಬಿಡ್ ಮಾಡಿದ್ದರೂ ಕೇವಲ 3.92 ಕೋಟಿ ಲೀಟರ್‌ಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಗರಿಷ್ಟ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದರೂ ನಮಗೆ ಕಡಿಮೆ ಹಂಚಿಕೆ ಮಾಡಲಾಗಿದೆ ಎಂದು ವಿಐಎನ್‌ಪಿ ಡಿಸ್ಟಿಲರೀಸ್ ವಾದಿಸಿತ್ತು.
ಕೇಂದ್ರದ ವಾದ ಏನು?
ಈಗಾಗಲೇ ದೇಶಾದ್ಯಂತ ಒಟ್ಟು 1,050 ಕೋಟಿ ಲೀಟರ್ ಎಥೆನಾಲ್ ಪೂರೈಕೆಗಾಗಿ 378 ಸರಬರಾಜುದಾರರೊಂದಿಗೆ ಒಪ್ಪಂದಗಳು ಅಂತಿಮಗೊಂಡಿವೆ. ಹೈಕೋರ್ಟ್ ಆದೇಶದಂತೆ ಒಬ್ಬ ಸರಬರಾಜುದಾರನ ಕೋಟಾವನ್ನು ಹೆಚ್ಚಿಸಿದರೆ ಅದು ದೇಶದ ಪೆಟ್ರೋಲ್‌ನಲ್ಲಿ 20% ರಷ್ಟು ಎಥೆನಾಲ್ ಮಿಶ್ರಣ ಮಾಡುವ (E20) ರಾಷ್ಟ್ರೀಯ ನೀತಿಯನ್ನು ಅಸ್ಥಿರಗೊಳಿಸುತ್ತದೆ ಮತ್ತು ಕಾನೂನು ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂದು ವೆಂಕಟರಮಣಿ ವಾದಿಸಿದರು.
