– ಪ್ರತಿಭಟನೆ ವೇಳೆ ಎಷ್ಟು ಬಲ ಪ್ರಯೋಗಿಸಬಹುದು?
ದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ಪೊಲೀಸ್ ಕ್ರಮದ ಬಗ್ಗೆ ವಿವಾದ ಮಧ್ಯೆ ಇತ್ತೀಚೆಗೆ ಬಿಹಾರದ ಸಿವಾನ್‌ನಲ್ಲಿ ಪ್ರತಿಭಟನಾಕಾರರನ್ನ ಚದುರಿಸಲು ಎಕೆ-47 ಬಳಸಿದ ಆರೋಪದ ಮೇಲೆ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಅಮಾನತುಗೊಂಡಿದ್ದಾರೆ. ಇದೇ ವೇಳೆ, ಜುಲೈ 25ರ ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಎಫ್‌ಐಆರ್‌ಗಳನ್ನ ಹಿಂಪಡೆಯುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.
ಈ ಎರಡು ಘಟನೆಗಳ ನಡುವೆಯೇ ಒಂದು ಪ್ರಮುಖ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ – ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಲು ಪೊಲೀಸರಿಗೆ ಪ್ರತ್ಯೇಕ ಅನುಮತಿ ಅಗತ್ಯವೇ? ಕಾನೂನು ಮತ್ತು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳ ಪ್ರಕಾರ, ಪ್ರತಿ ಬಾರಿ ಲಾಠಿಚಾರ್ಜ್ ಮಾಡುವ ಮೊದಲು ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಪೊಲೀಸರು ಬಳಸಿದ ಬಲವು ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಮತ್ತು ಸಮಂಜಸವಾಗಿತ್ತು ಎಂಬುದನ್ನ ಸಾಬೀತುಪಡಿಸಬೇಕಾಗುತ್ತದೆ.

ಪ್ರತಿಭಟನೆ ನಿಯಂತ್ರಿಸಲು ಪೊಲೀಸರಿಗೆ ಬಲಪ್ರಯೋಗದ ಅಧಿಕಾರ ಇದೆಯೇ?
ಹೌದು. ಭಾರತೀಯ ಕಾನೂನು ಪ್ರಕಾರ, ಯಾವುದೇ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದರೆ, ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗುವ ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟಾಗುವ ಪರಿಸ್ಥಿತಿಯಲ್ಲಿ ಪೊಲೀಸರು ಬಲಪ್ರಯೋಗ ಮಾಡಬಹುದು.
ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿಯೂ ಇದೇ ಕಾರಣವನ್ನು ಪೊಲೀಸರು ಉಲ್ಲೇಖಿಸಿದ್ದರು. ಆದರೆ, ಇದರರ್ಥ ಪೊಲೀಸರು ಮನಬಂದಂತೆ ಅಥವಾ ಮಿತಿಮೀರಿದ ಲಾಠಿಚಾರ್ಜ್ ನಡೆಸಬಹುದು ಎಂಬುದಲ್ಲ. ಮೇಲಧಿಕಾರಿಗಳ ಆದೇಶದ ಮೇರೆಗೆ ಕಾರ್ಯನಿರ್ವಹಿಸಿದ್ದರೂ ಸಹ, ಅಗತ್ಯಕ್ಕಿಂತ ಹೆಚ್ಚಿನ ಅಥವಾ ಕಾನೂನುಬಾಹಿರ ಬಲ ಬಳಸಿದ್ದರೆ ಸಂಬಂಧಿಸಿದ ಅಧಿಕಾರಿಗಳು ವೈಯಕ್ತಿಕವಾಗಿ ಹೊಣೆಗಾರರಾಗಬಹುದು. ಮೇಲಿಂದ ಆದೇಶ ಬಂದಿತ್ತು ಎಂಬ ಕಾರಣ ಮಾತ್ರ ಅವರಿಗೆ ಸಂಪೂರ್ಣ ರಕ್ಷಣೆ ನೀಡುವುದಿಲ್ಲ.

ಲಾಠಿಚಾರ್ಜ್‌ಗೂ ಮುನ್ನ ಪೊಲೀಸರು ಯಾವ ಕ್ರಮಗಳನ್ನು ಪಾಲಿಸಬೇಕು?
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 129 ಮತ್ತು 130 ಪ್ರಕಾರ, ಪೊಲೀಸರು ನೇರವಾಗಿ ಲಾಠಿಚಾರ್ಜ್ ಮಾಡುವಂತಿಲ್ಲ. ಮೊದಲು ಈ ಕ್ರಮಗಳನ್ನ ಕಡ್ಡಾಯವಾಗಿ ಅನುಸರಿಸಬೇಕು.
ಕಾನೂನಿನಲ್ಲಿ ನಿಗದಿಪಡಿಸಿರುವ ಕ್ರಮಗಳು
* ಅಕ್ರಮ ಗುಂಪು ಎಂದು ಘೋಷಣೆ: ಯಾವುದೇ ಒಂದು ಸಮೂಹ ಅನುಮತಿಯಿಲ್ಲದೇ ಗುಂಪುಗೂಡಿದರೆ ಕಾನೂನುಬಾಹಿರ ಸಭೆ ಎಂದು ಘೋಷಿಸಬೇಕು.
* ಸ್ಪಷ್ಟ ಎಚ್ಚರಿಕೆ: ಸ್ಥಳವನ್ನು ಖಾಲಿ ಮಾಡುವಂತೆ ಸ್ಪಷ್ಟ ಸೂಚನೆ ಮತ್ತು ಸಮರ್ಪಕ ಎಚ್ಚರಿಕೆ ನೀಡಬೇಕು.
* ಹಂತ ಹಂತವಾಗಿ ಬಲಪ್ರಯೋಗ: ಮೊದಲು ವಾಟರ್ ಕ್ಯಾನನ್, ಟಿಯರ್ ಗ್ಯಾಸ್‌ನಂತಹ ಕಡಿಮೆ ಬಲದ ಕ್ರಮಗಳನ್ನ ಬಳಸಬೇಕು.
* ಕೊನೆಯ ಆಯ್ಕೆಯಾಗಿ ಲಾಠಿಚಾರ್ಜ್: ಬೇರೆ ಮಾರ್ಗವಿಲ್ಲದಿದ್ದಾಗ ಮಾತ್ರ ಲಾಠಿಚಾರ್ಜ್ ಮಾಡಬಹುದು.
ಲಾಠಿಚಾರ್ಜ್ ವೇಳೆ ಯಾವ ನಿಯಮ ಪಾಲಿಸಬೇಕು?
* ಪೊಲೀಸ್ ಕೈಪಿಡಿಗಳ ಪ್ರಕಾರ, ಲಾಠಿಯಿಂದ ಸೊಂಟದ ಕೆಳಭಾಗಕ್ಕೆ ಮಾತ್ರ ಹೊಡೆಯಬೇಕು.
* ತಲೆ, ಕುತ್ತಿಗೆ, ಕಾಲರ್ ಬೋನ್ ಅಥವಾ ದೇಹದ ಪ್ರಮುಖ ಅಂಗಗಳಿಗೆ ಹೊಡೆಯುವುದು ನಿಯಮ ಉಲ್ಲಂಘನೆಯಾಗುತ್ತದೆ.

ಬಲದ ದುರುಪಯೋಗ ಮಾಡಿದರೆ ಪೊಲೀಸರಿಗೆ ಯಾವ ಶಿಕ್ಷೆ?
ತನಿಖೆಯಲ್ಲಿ ಪೊಲೀಸ್ ಅಧಿಕಾರಿ ತನ್ನ ಅಧಿಕಾರವನ್ನ ದುರುಪಯೋಗಪಡಿಸಿಕೊಂಡಿದ್ದಾರೆ ಅಥವಾ ಅತಿಯಾದ ಬಲ ಬಳಸಿದ್ದಾರೆ ಎಂದು ಸಾಬೀತಾದರೆ, ಭಾರತೀಯ ನ್ಯಾಯ ಸಂಹಿತೆ (BNS) ಯ ಅನ್ವಯ ಇಲಾಖಾ ಕ್ರಮಗಳ ಜೊತೆಗೆ ಕ್ರಿಮಿನಲ್ ಪ್ರಕರಣವೂ ದಾಖಲಿಸಬಹುದು.
ಪ್ರಕರಣದ ಗಂಭೀರತೆಯನ್ನು ಅವಲಂಬಿಸಿ ಇಲಾಖಾ ಹಂತದ ಶಿಸ್ತು ಕ್ರಮ, ದಂಡ, ಸೇವಾ ಶಿಕ್ಷೆ, ಜೈಲು ಶಿಕ್ಷೆ ಯಾವುದನ್ನಾದರೂ ವಿಧಿಸಬಹುದು. ಇದಲ್ಲದೇ, ಸಂತ್ರಸ್ತರು ಮಾನವ ಹಕ್ಕು ಆಯೋಗ ಅಥವಾ ನ್ಯಾಯಾಲಯದ ಮೊರೆ ಹೋಗುವ ಹಕ್ಕೂ ಹೊಂದಿರುತ್ತಾರೆ.
ಜಂತರ್ ಮಂತರ್ ಕ್ರಮದ ಬಗ್ಗೆ ದೆಹಲಿ ಪೊಲೀಸರ ಸಮರ್ಥನೆ ಏನು?
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಜಂತರ್ ಮಂತರ್‌ನಲ್ಲಿ ಕೇವಲ ಧರಣಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಯಾವುದೇ ಅನುಮತಿ ಇರಲಿಲ್ಲ. ಸಂಸತ್ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿತ್ತು.
ಪೊಲೀಸರ ಹೇಳಿಕೆಯಂತೆ, ಹಲವು ವಾರಗಳ ಕಾಲ ಪ್ರತಿಭಟನೆ ಶಾಂತಿಯುತವಾಗಿಯೇ ನಡೆದಿದ್ದು, ಘೋಷಣೆಗಳು ಹಾಗೂ ಪ್ರಚೋದನೆಗಳ ನಡುವೆಯೂ ಪೊಲೀಸರು ಯಾವುದೇ ಬಲಪ್ರಯೋಗ ಮಾಡಿರಲಿಲ್ಲ. ಆದರೆ, ಪ್ರತಿಭಟನಾಕಾರರು ಬ್ಯಾರಿಕೇಡ್ ಒಡೆದು ಹೈ-ಸಿಕ್ಯುರಿಟಿ ಪ್ರದೇಶದತ್ತ ಸಾಗಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತೆಂದು ಪೊಲೀಸರು ಹೇಳಿದ್ದಾರೆ.
ಇದಲ್ಲದೆ, ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ, ಹಿರಿಯ ಹಾಗೂ ವಯೋವೃದ್ಧ ಸಿಬ್ಬಂದಿಯನ್ನು ತಳ್ಳಲಾಗಿದೆ, ಮಾಧ್ಯಮ ಸಿಬ್ಬಂದಿಗೂ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳನ್ನೂ ಪೊಲೀಸರು ಮಾಡಿದ್ದಾರೆ. ಆದರೆ, ಈ ಆರೋಪಗಳಿಗೆ ಇನ್ನೂ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.
ಒಟ್ಟಿನಲ್ಲಿ ಈ ಬೆಳವಣಿಗೆಗಳು ಪ್ರತಿಭಟನೆ, ಪೊಲೀಸ್ ಅಧಿಕಾರ ಮತ್ತು ಕಾನೂನು ಮಿತಿಗಳ ಕುರಿತು ದೇಶಾದ್ಯಂತ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
