ಬೆಂಗಳೂರು: ಎಂಜಿನಿಯರಿಂಗ್, ಪಶು ವೈದ್ಯಕೀಯ ಸೇರಿದಂತೆ ಇತರ ಯುಜಿಸಿಇಟಿ (UGCET) ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.10ರ ಒಳಗೆ ನಿಗದಿತ ಶುಲ್ಕ ಪಾವತಿಸಿ (ಪಾವತಿಸದೇ ಇದ್ದಲ್ಲಿ) ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸೆ.11ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

ಇದು ಕಡ್ಡಾಯ ಪ್ರವೇಶ ಆಗಿದೆ. ಸೀಟು ರದ್ದತಿ ಕೋರಿ ಸಲ್ಲಿಸುವ ಮನವಿಗಳನ್ನ ಯಾವುದೇ ಕಾರಣಕ್ಕೂ ಪುರಸ್ಕರಿಸುವುದಿಲ್ಲ. ಕಾಲೇಜಿಗೆ ಪ್ರವೇಶ ಪಡೆಯದೇ ಇರುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
