Connect with us

Bengaluru City

ಮಹದಾಯಿ ಹೋರಾಟ- ತೀವ್ರ ಜ್ವರದಿಂದ ಧರಣಿನಿರತ ರೈತರು ಅಸ್ವಸ್ಥ

Published

on

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಕೆಲವು ಹೋರಾಟಗಾರರು ಜ್ವರದಿಂದ ಬಳಲುತ್ತಿದ್ದಾರೆ.

ರೈತ ಹನುಮಂತಪ್ಪ ತೀವ್ರ ಅಸ್ವಸ್ಥರಾಗಿದ್ದು, ಆಂಬುಲೆನ್ಸ್ ಮೂಲಕ ಕೆಸಿ ಜನರಲ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಏಳಕ್ಕೂ ಹೆಚ್ಚು ರೈತ ಮಹಿಳೆಯರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ವೈದ್ಯರನ್ನು ಕರೆಸುವ ಸಾಧ್ಯತೆ ಇದೆ. ಸಿನಿಮಾ ನಟ ನಟಿಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಚಿತ್ರರಂಗ ಹೋರಾಟಗಾರರ ಬೆಂಬಲಕ್ಕೆ ಬಂದಿದೆ.

ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಸಂತೈಸುವ ನಾಟಕವಾಡಿದ ಸಿನಿಮಾ ಮಂದಿ ಇದೀಗ ಬೆಂಗಳೂರಿಗೆ ಬಂದರೂ ಭೇಟಿಯ ಸೌಜನ್ಯ ಇಲ್ಲ. ನಮಗೆ ಊಟ, ತಿಂಡಿ, ಹಣ ಬೇಡ, ಕುಡಿಯಲು ನೀರು ಬೇಕಷ್ಟೆ. ಶಿವರಾಜಕುಮಾರ್ ಹುಬ್ಬಳ್ಳಿ ಗೆ ಬಂದಾಗ ನಿಮಗೆ ನ್ಯಾಯ ಒದಗಿಸಲು ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದರು. ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟರೂ ಯಾರೊಬ್ಬರೂ ಈ ಕಡೆ ತಲೆ ಹಾಕಿಲ್ಲ. ಯಾವ ರಾಜಕೀಯ ಪಕ್ಷದವರ ಕರುಣೆಯೂ ನಮಗೆ ಬೇಡ. ನಮಗೆ ಬೇಕಾದಷ್ಟು ಆಹಾರ ನಮ್ಮ ಬಳಿ ಇದೆ. ಬೆಂಗಳೂರಿನ ಜನ ನಮ್ಮ ಸಹಾಯಕ್ಕಿದ್ದಾರೆ. ರಾಜಕೀಯ ಪಕ್ಷಗಳಿಂದ ನಮಗೆ ಬೇಕಾಗಿರುವುದು ನೀರಿನ ನ್ಯಾಯ ಅಷ್ಟೆ ಅಂತ ಮಹದಾಯಿ ಹೋರಾಟಗಾರ ಎಸ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಪ್ರತಿಭಟನಾ ಸ್ಥಳಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಆಗಮಿಸಿ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿದ್ರು. ಚಿತ್ರರಂಗದ ಯಾರು ಬಂದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.

ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ್ ಬಣಕಾರ್, ಈ ಚಳುವಳಿಗೆ ಬರುತ್ತಿರುವ ವಿಚಾರ ತಿಳಿದಿರಲಿಲ್ಲ. ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಆನೇಕಲ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ನಾಳೆ ಬರುವುದಕ್ಕೆ ಪ್ಲಾನ್ ಮಾಡಿದ್ವಿ, ಅಷ್ಟರೊಳಗೆ ಇವತ್ತು ಬಂದು ಬೆಂಬಲ ಸೂಚಿಸೋದಕ್ಕೆ ಬಂದಿದ್ದೇವೆ. ಹುಬ್ಬಳ್ಳಿಗೆ ಹೋಗಿದ್ದವರಿಗೆ ಇಲ್ಲಿಗೆ ಬರಲು ಕಷ್ಟವಲ್ಲ. ಮೂರು ದಿನಗಳ ರಜೆ ಇದ್ದರಿಂದ ಕೆಲವರು ಹೊರಗಡೆ ಹೋಗಿದ್ದಾರೆ. ನಾಳೆ ಫಿಲ್ಮ್ ಚೇಂಬರ್ ಅಧ್ಯಕ್ಷರು ಸೇರಿದಂತೆ ಇಡೀ ಚಿತ್ರರಂಗ ಭೇಟಿ ನೀಡಲಿದೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ ಅಂತ ಭರವಸೆ ನೀಡಿದ್ರು.

ಮಹದಾಯಿ ಹೋರಾಟಗಾರರಿಗೆ ಅಪ್ಪಾಜಿ ಕ್ಯಾಂಟಿನ್ ನಿಂದ ಜೆಡಿಎಸ್ ಎಮ್‍ಎಲ್‍ಸಿ ಶರವಣ ಉಪಹಾರವನ್ನ ತಂದಿದ್ರು. ಅದ್ರೇ ಅದನ್ನ ಹೋರಾಟಗಾರರು ಸ್ವೀಕರಿಸದೇ ನಮಗೆ ತಿಂಡಿ ಬೇಡ ನಮಗೆ ನೀರು ಕೊಡಿ. ನಿಮ್ಮೆಲ್ಲ ರಾಜಕೀಯ ಬಿಟ್ಟು ನೀರು ಕೊಡಿಸೋ ಪ್ರಯತ್ನ ಮಾಡಿ ಎಂದ್ರು. ಇದಕ್ಕೆ ಉತ್ತರಿಸಿದ ಶರವಣ ನಮ್ಮ ಪಕ್ಷ ನಿಮಗೆ ನೈತಿಕಬೆಂಬಲ ಕೊಡುತ್ತೆ. ಮಾನವೀಯ ದೃಷ್ಟಿಯಿಂದ ಉಪಹಾರ ತಂದಿದ್ದೇವೆ. ನಿಮಗೆ ನೀರು ಕೊಡಿಸೋ ಪ್ರಯತ್ನ ಜೆಡಿಎಸ್ ಮಾಡುತ್ತೆ ಅಂದ್ರು.

Click to comment

Leave a Reply

Your email address will not be published. Required fields are marked *