ರಾಯಚೂರು: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿಗಳ (Guru Raghavendra Swamy) 355ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಕಲಿಯುಗ ಕಾಮಧೇನು ಗುರುರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಉತ್ತರಾರಾಧನೆ ಹಿನ್ನೆಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಹೆಲಿಕ್ಯಾಪ್ಟರ್ ಮೂಲಕ ಪ್ರತೀವರ್ಷದಂತೆ ಮಹಾರಥೋತ್ಸವ ವೇಳೆ ರಥಕ್ಕೆ ಪುಷ್ಪವೃಷ್ಠಿಯನ್ನ ಮಾಡಲಾಯಿತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರು ರಾಯರ ಮಧ್ಯಾರಾಧನೆ – ಮಠದಲ್ಲಿ ಚಿನ್ನದ ರಥೋತ್ಸವ, ಮಹಾಪಂಚಾಮೃತ ಅಭಿಷೇಕ

ರಥೋತ್ಸವ ಆರಂಭಕ್ಕೂ ಮುನ್ನ ಭಕ್ತರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಆಶೀವರ್ಚನ ನೀಡಿದರು. ನೇಪಾಳದಲ್ಲಿನ ಪ್ರವಾಹ ಪರಿಸ್ಥಿತಿಗೆ ಮರುಗಿದ ಶ್ರೀಗಳು, ಮನೆ ಮಠ ಕಳೆದುಕೊಂಡ ಸಂತ್ರಸ್ತರ ಜೊತೆ ನಾವೆಲ್ಲಾ ಇದ್ದೇವೆ. ನೇಪಾಳ ಸಂತ್ರಸ್ತರ ಸಹಾಯ ಕಾರ್ಯಕ್ಕೆ ಮಠ ತೊಡಗುತ್ತದೆ. ಇದು ಮಠದ ಪ್ರಚಾರಕ್ಕಾಗಿ ಅಲ್ಲ, ಮಠ ಇರುವುದೇ ಭಕ್ತರಿಂದ ಭಕ್ತರಿಗಾಗಿ. ನೇಪಾಳ ಸಂತ್ರಸ್ತರಿಗೆ ಸಹಾಯ ಮಾಡಲು ಶ್ರೀ ಮಠ ಯೋಜನೆಗಳನ್ನ ಸಿದ್ಧಪಡಿಸಿದೆ. ಈ ಬಾರಿ ರಾಜ್ಯದಲ್ಲಿ ಬರಗಾಲ ಪರಸ್ಥಿತಿ ಇದೆ ರೈತರು ಎದೆಗುಂದಬಾರದು. ನಾಡಿನ ಜನತೆಗೆ ಒಳ್ಳೆಯ ದಿನಗಳು ಬರಲಿವೆ ಎಂದರು.

ಈ ಮೂಲಕ ಗುರುರಾಯರ 355ನೇ ಆರಾಧನಾ ಮಹೋತ್ಸವದ ಮುಖ್ಯ ಮೂರು ದಿನಗಳು ಮುಕ್ತಾಯವಾಗಿದ್ದು, ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ಮಂತ್ರಾಲಯ ರಾಯರ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ; ಇಂದು ಅದ್ಧೂರಿ ಮಹಾರಥೋತ್ಸವ
