– ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 355 ವರ್ಷ
ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ (Raghavendra Swamy) 355ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ (Mantralaya) ಶ್ರದ್ಧಾ ಭಕ್ತಿಗಳಿಂದ ನಡೆಯುತ್ತಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 355 ವರ್ಷಗಳು ಸಂದಿವೆ. ಈ ಹಿನ್ನೆಲೆ ಮಂತ್ರಾಲಯ ರಾಯರ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವದ (Aradhana Mahotsava) ಮುಖ್ಯ ಘಟ್ಟ ಮಧ್ಯಾರಾಧನೆಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಮಧ್ಯಾರಾಧನೆಯ ದಿನ ಭಕ್ತರಿಗೆ ವಿಶೇಷ ಅನುಗ್ರಹ ದೊರೆಯುತ್ತದೆ ಎಂಬ ಪ್ರತೀತಿಯಿದೆ. ಈ ದಿನ ವಿಶೇಷವಾಗಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ಮಾಡುತ್ತಾರೆ. ಪ್ರತಿನಿತ್ಯದ ಪಂಚಾಮೃತ ಅಭಿಷೇಕಕ್ಕಿಂತ ಹತ್ತುಪಟ್ಟು ಹೆಚ್ಚು ಪದಾರ್ಥಗಳನ್ನ ಬಳಸಲಾಗುತ್ತದೆ. ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಶ್ರೀಗಳು ವೃಂದಾವನದ ನಾಲ್ಕುದಿಕ್ಕಿಗೂ ಅಭಿಷೇಕ ಮಾಡುತ್ತಾರೆ. ಬಳಿಕ ಚಿನ್ನದ ಕವಚದೊಂದಿಗೆ ಅಲಂಕಾರ ಪೂಜೆ ನಡೆಯುತ್ತದೆ. ಮಧ್ಯಾರಾಧನೆ ಅಂಗವಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಜರುಗುತ್ತದೆ. ಇದನ್ನೂ ಓದಿ: ಬೈಕ್ ಬೆನ್ನಟ್ಟಿ ಬಂದು ಗುಂಡಿನ ದಾಳಿ – ಪಂಜಾಬ್‌ನಲ್ಲಿ ಆಪ್ ನಾಯಕನ ಬರ್ಬರ ಹತ್ಯೆ

ಇಂದಿಗೂ ರಾಯರು ವೃಂದಾವನದಲ್ಲಿ ತಮ್ಮ ಯೋಗ ಸಾಮರ್ಥ್ಯದಿಂದ ಸಶರೀರರಾಗಿ ಇದ್ದು ಇಂದು ವಿಶೇಷವಾಗಿ ಭಕ್ತರನ್ನ ಅನುಗ್ರಹಿಸುತ್ತಾರೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆ ಮಧ್ಯಾರಾಧನೆ ಆರಾಧನಾ ಮಹೋತ್ಸವದಲ್ಲಿ ವಿಶೇಷವಾದದ್ದು. ಇನ್ನೂ ಮಠದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ. ಈ ದಿನ ದೇಶದ ವಿವಿಧೆಡೆಯಿಂದ ಭಕ್ತರು, ಗಣ್ಯರು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುತ್ತಾರೆ. ಇದನ್ನೂ ಓದಿ: ನೇಪಾಳ ಪ್ರವಾಹ ದುರಂತ – 3 ದಿನ ಮಣ್ಣಿನಡಿ ಸಿಲುಕಿದ್ದ 6 ವರ್ಷದ ಬಾಲಕಿಯ ರಕ್ಷಣೆ

ಇಂದಿನ ಮಧ್ಯಾರಾಧನೆ ಬಳಿಕ ಆಗಸ್ಟ್ 31ರಂದು ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಉತ್ತರಾರಾಧನೆಯೊಂದಿಗೆ ರಾಯರ ಆರಾಧನಾ ಮಹೋತ್ಸವದ ಮುಖ್ಯ ಮೂರು ದಿನಗಳ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. ಸೆಪ್ಟೆಂಬರ್ 2ರವರೆಗೆ ರಾಯರ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಇದನ್ನೂ ಓದಿ:Exclusive | ಗ್ಯಾನೇಂದ್ರ ಬೆನ್ನಲ್ಲೇ ಸಿಐಡಿ ಮತ್ತೊಂದು ಬೇಟೆ – ಸಹಾಯ ಮಾಡಿದ್ದ ಮಧ್ಯವರ್ತಿ ವಶಕ್ಕೆ
