ರಾಯಚೂರು: ಮಂತ್ರಾಲಯದಲ್ಲಿ (Mantralayam) ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಭಕ್ತಿ ಮತ್ತು ಸಂಭ್ರಮದಿಂದ ನಡೆಯುತ್ತಿದೆ. ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರಾರಾಧನೆ ಹಿನ್ನೆಲೆ ಇಂದು ಮಠದ ರಾಜಬೀದಿಯಲ್ಲಿ ಅದ್ಧೂರಿ ಮಹಾರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ.
ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನು ಉತ್ತರಾರಾಧನೆಯಾಗಿ ಆಚರಿಸಲಾಗುತ್ತದೆ. ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಲ್ಲಿ ಹೊರಪ್ರಾಕಾರಕ್ಕೆ ಬಂದು ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ.
ಮಹಾರಥೋತ್ಸವಕ್ಕೂ ಮುನ್ನ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸಲಿದ್ದಾರೆ. ರಾಯರ ವೃಂದಾವನಕ್ಕೆ ಗುಲಾಲ್ ಎರಚುವ ಮೂಲಕ ವಸಂತೋತ್ಸವ ನಡೆಯಲಿದೆ. ಬಳಿಕ ಗುರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ನಂತರ ಮಠದ ಮದ್ವದ್ವಾರದಿಂದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಈ ವೇಳೆ ವಿವಿಧೆಡೆಯಿಂದ ಆಗಮಿಸಿರುವ ಭಜನಾ ಮಂಡಳಿಗಳು ಹಾಗೂ ಕಲಾತಂಡಗಳು ರಥೋತ್ಸವಕ್ಕೆ ಮತ್ತಷ್ಟು ಮೆರಗು ನೀಡಲಿವೆ. ಇದನ್ನೂ ಓದಿ: ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ; 788 ಮಂದಿ ಸಾವು, 2,500ಕ್ಕೂ ಹೆಚ್ಚು ನಾಪತ್ತೆ
ಉತ್ತರಾರಾಧನೆ ದಿನ ರಾಯರು ಬಹಿರ್ಮುಖವಾಗಿ ಭಕ್ತರ ಕಡೆಗೆ ದೃಷ್ಟಿ ಹರಿಸುತ್ತಾರೆ. ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ರಾಯರ ಅನುಗ್ರಹ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದಾರೆ.
ಈ ಬಾರಿಯ ಆರಾಧನಾ ಮಹೋತ್ಸವದಲ್ಲಿ ರಾಯರ ವೃಂದಾವನಕ್ಕೆ ಭಕ್ತರು ನೀಡಿರುವ ನವರತ್ನ ಕವಚವನ್ನೂ ಅಳವಡಿಸಲಾಗಿದೆ. ಮಹಾರಥೋತ್ಸವದ ವೇಳೆ ಪ್ರತಿವರ್ಷದಂತೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿ ಮಾಡಲಾಗುತ್ತದೆ.
ಆರಾಧನಾ ಮಹೋತ್ಸವ ಹಿನ್ನೆಲೆ ಇನ್ನೆರಡು ದಿನಗಳ ಕಾಲ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಂತ್ರಾಲಯದ ರಾಜಬೀದಿ ರಾಯರ ನಾಮಸ್ಮರಣೆ, ಭಜನೆ ಮತ್ತು ಭಕ್ತರ ಸಂಭ್ರಮದಿಂದ ಕಳೆಗಟ್ಟಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 6 ಸಿಕ್ಸರ್ – ಮೈದಾನದಲ್ಲಿ ಅಭಿಷೇಕ್ ಶರ್ಮಾ ರನ್ ಸುನಾಮಿ
