ಹಾಯ್ ಮಧುರ
ನೀನು ಬರೆಯುವ ಪತ್ರಗಳು ತಡವಾಗಿ ತಲುಪುತ್ತಿವೆ. ಆದ್ರೆ ನೀನ್ನೊಳಗಿನ ಭಾವಗಳು ಅದೆಷ್ಟು ಬೇಗ ತಲುಪುತ್ತವೆ ಗೊತ್ತಾ? ನೀನು ನನ್ನ ಬಗ್ಗೆ ಆಲೋಚಿಸುವ ಕ್ಷಣಗಳು. ನಾ ನೆಟ್ಟ ಪ್ರೀತಿಯ ಬಳ್ಳಿಗೆ ನೀನು ಒಲವಿನ ಅಮೃತ ಉಣಿಸಿ ಬೆಳೆಸುವ ಆ ಮಮತೆ ನನ್ನ ಬಳಿಯೇ ಸದಾ ಸುಳಿದಾಡುತ್ತದೆ.
ಒಮ್ಮೊಮ್ಮೆ ಈ ಪೋಸ್ಟ್‌ಮ್ಯಾನ್ ತಮಾಷೆಗಾಗಿ ನಿನ್ನ ಲೆಟರನ್ನ ಬೆಕಂತಲೇ ತಡವಾಗಿ ಕೊಡುತ್ತಾನೆ. ಆಗೆಲ್ಲ ನೀನು ಪತ್ರ ಬರೆದೇ ಇಲ್ವೇನೋ ಅನ್ಸಿದ್ರೂ, ಒಳಮನಸ್ಸಿಗೆ ನೀ ಬರೆದ ಪತ್ರ ಅಂಚೆ ಅಣ್ಣನ ಬ್ಯಾಗ್‌ನಿಂದ ಕೂಗಿ ಇಲ್ಲೇ ಇದ್ದೇನೆ ಎಂದು ಹೇಳುತ್ತಿರುತ್ತದೆ. ಎಷ್ಟೊಂದು ಶಕ್ತಿ ಅಲ್ವಾ ಈ ಪ್ರೀತಿಗೆ?

ನೀನು ಎಷ್ಟೋ ಸಲ ಈ ಪತ್ರದಲ್ಲಿ ಇದನ್ನೇ ಬರೆದಿರೋದು ಅಂತ ಪತ್ರ ಹಿಡಿದ ತಕ್ಷಣವೇ ಗೊತ್ತಾಗುತ್ತೆ. ಇಲ್ಲ ನೀನು ಬರೆಯುವ ಸಮಯದಲ್ಲಿ ನನ್ನನ್ನು ಅದೆಲ್ಲ ಕಾಡಿದ್ದೂ ಉಂಟು. ನೀನು ಪತ್ರ ಬರೆದ ದಿನಾಂಕ ದಾಖಲಿಸಿದಾಗ ಆ ದಿನ ನನಗೆ ಹೀಗೆಲ್ಲ ಮನಸ್ಸಲ್ಲಿ ಅನ್ಸಿತ್ತಲ್ವಾ ಎಂದು ಎಷ್ಟೋ ಸಲ ಡೈರಿ ತೆಗೆದು ಓದಿ.. ನಕ್ಕುಬಿಟ್ಟಿದ್ದೇನೆ.
ಎಷ್ಟೋ ಸಲ ನೀನು ಅಲ್ಲಿ ಹಾಡುವ ಹಾಡು ನನಗೆ ಕೇಳಿದಂತೆ ಫೀಲ್ ಆಗುತ್ತೆ. ಪ್ರೀತಿಯಲ್ಲಿ ಇದೊಂದು ಭ್ರಮೆ ಎಂದು ನಿನಗೆ ಅನ್ನಿಸಬಹುದೇನೋ? ಆದ್ರೆ ಗೊತ್ತಿಲ್ಲ. ಇದು ನನ್ನ ಭಾವಗಳ ಬಳ್ಳಿಯಲ್ಲಿ ಅರಳಿದ ಪ್ರೀತಿಯ ಆಸರೆಯ ಹೂಗಳ? ವಾಸ್ತವನಾ ಅಂತ.. ಆದ್ರೆ ಈ ಮಧುರವಾದ ಹಗಲುಗನಸು ಅದೆಷ್ಟು ಸ್ವೀಟ್..!

ಒಮ್ಮೊಮ್ಮೆ ತಂಗಾಳಿಗೆ ಮನೆಯಂಗಳದ ಬೆಂಚ್ ಮೇಲೆ ಕೂತು ಕಣ್ಮುಚ್ಚಿದಾಗ ಕೆನ್ನೆಗೆ ಒಂದು ಮುತ್ತು ಕೊಟ್ಟು ಓಡುವ ನೀನು.. ಕಣ್ತೆರೆದಾಗ ಇರೋದೇ ಇಲ್ಲ..! ಈಗ ಹೇಳು ಇದು ನಿನ್ನ ಮನಸ್ಸಲ್ಲಿರೋ ಆಸೆನಾ..? ಹೀಗೂ ಆಸೆಗಳನ್ನ ಕಳಿಸಿ ಕಾಡ್ತಿಯಾ? ಆದ್ರೂ ಈ ಪ್ರೇಮದ ಜಾಡು ಎಷ್ಟು ಮಜಾ ಅಲ್ವಾ..? ಈ ರೀತಿ ನಿನಗೂ ಆಗಿದ್ರೆ ಹೇಳು.
ನಿನ್ನ ಉತ್ತರಕ್ಕೆ ಎದುರು ನೋಡುವ
ನಿನ್ನ ಒಲವಿನ ಗೆಳೆಯ
