ಚಾಮರಾಜನಗರ: ಹನೂರು (Hanur) ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಲಾಜರ್ ದೊಡ್ಡಿಯಲ್ಲಿ ಚೆಕ್ ಡ್ಯಾಂ ಕೊಚ್ಚಿ ಹೋಗಿದೆ.
ಸುಮಾರು 12 ವರ್ಷಗಳ ಹಿಂದೆ ಚೆಕ್ ಡ್ಯಾಂ ಕಟ್ಟಲಾಗಿತ್ತು. ನೀರಿನಲ್ಲಿ ರಭಸಕ್ಕೆ ಚೆಕ್ ಡ್ಯಾಂ ಅಳವಡಿಸಿದ್ದ ಕಲ್ಲುಗಳು ಕುಸಿತವಾಗಿವೆ. ಈ ಭಾಗದ ಜನರ ನೀರಾವರಿಗೆ ಅನುಕೂಲವಾಗಿತ್ತು. ಹೊಸ ಚೆಕ್ ಡ್ಯಾಂ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ.
ಮನೆ ಕುಸಿತ
ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ಕೊಚ್ಚಿ ಹೋಗಿ ಕುಟುಂಬ ಬೀದಿಗೆ ಬಿದ್ದಿದೆ. ಸಂತ್ರಸ್ತ ರಾಮಸ್ವಾಮಿ ಅವರಿಗೆ ಸೇರಿದ ಮನೆಯಲ್ಲಿ ಅವರ ತಾಯಿಯವರು ಮಲಗಿದ್ದ ವೇಳೆ ರಾತ್ರಿ 9 ಗಂಟೆ ಸುಮಾರಿಗೆ ಹಳ್ಳದ ನೀರು ಮನೆಗೆ ನುಗ್ಗಿ ಮನೆ ಕೊಚ್ಚಿ ಹೋಗಿದೆ. 50-60 ವರ್ಷದ ಹಿಂದೆ ಈ ರೀತಿ ನೀರು ಬಂದಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೆ, ತಮಗೆ ಈ ರೀತಿ ಪ್ರವಾಹದ ಅನುಭವ ಇರಲಿಲ್ಲ ಎಂದು ರಾಮಸ್ವಾಮಿ ತಿಳಿಸಿದ್ದಾರೆ.
ನೀರು ನುಗ್ಗುತ್ತಿದ್ದಂತೆ ತಾಯಿಯವರನ್ನು ಹೊರಗೆ ಕರೆತಂದು ಪ್ರಾಣ ಉಳಿಸಿಕೊಳ್ಳಲಾಗಿದೆ. ಮನೆಯಲ್ಲಿದ್ದ ಬಟ್ಟೆ-ಬರೆ, ಬೀರು, ಪಾತ್ರೆ-ಪಡಗ ಸೇರಿದಂತೆ ಗೃಹೋಪಯೋಗಿ ವಸ್ತುಗಳು, 40 ಗ್ರಾಂ ಚಿನ್ನಾಭರಣ ಮತ್ತು 70 ಸಾವಿರ ರೂ. ನಗದು ಹಣ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನೆಗೆ ಸುಮಾರು 2 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದ್ದು, ಸದ್ಯ ಕುಟುಂಬಕ್ಕೆ ಉಳಿಯಲು ಸೂರು ಇಲ್ಲದಂತಾಗಿದೆ ಎಂದು ಸಂತ್ರಸ್ತರು ಕಣ್ಣೀರು ಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನೆಲಕ್ಕುರುಳಿದ ಬೃಹತ್ ಮರ
ರಾಮಾಪುರ ಗ್ರಾಮದಲ್ಲಿ ಸುರಿದ ಭಾರೀ ಮಳೆ, ಬಿರುಗಾಳಿಗೆ ಕೆಇಬಿ ಕಚೇರಿ ಮುಂಭಾಗದಲ್ಲಿದ್ದ ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಳೆಯ ರಭಸಕ್ಕೆ ಏಕಾಏಕಿ ದೊಡ್ಡ ಮರ ಧರೆಗುರುಳಿದ ಪರಿಣಾಮ ಅದರ ಅಡಿಯಲ್ಲಿದ್ದ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಸಾರ್ವಜನಿಕರಾಗಲಿ ಅಥವಾ ವಾಹನ ಸಂಚಾರವಾಗಲಿ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದರಿಂದ ದೊಡ್ಡಮಟ್ಟದ ಅನಾಹುತ ತಪ್ಪಿದಂತಾಗಿದೆ.
ಮರ ಹಾಗೂ ಕಂಬಗಳು ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ಕಡಿತಗೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣ ವ್ಯತ್ಯಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೆಸ್ಕ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಿದ್ದಿರುವ ಮರ ಹಾಗೂ ಕಂಬಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶೀಘ್ರವೇ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

