ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ವ್ಯತ್ಯಾಸಗಳ ಕಾರಣದಿಂದಾಗಿ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ (Upendra Dwivedi), ಚುನಾವಣಾ ಆಯುಕ್ತ ಎಸ್.ಎಸ್. ಸಂಧು (SS Sandhu) ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ.
ದೆಹಲಿಯಲ್ಲಿ 97 ಲಕ್ಷಕ್ಕೂ ಹೆಚ್ಚು ಮತದಾರರನ್ನು ಒಳಗೊಂಡ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, SIR ವೇಳೆ ಕಂಡುಬಂದ ದಾಖಲೆಗಳ ವ್ಯತ್ಯಾಸಗಳ ಹಿನ್ನೆಲೆ ಇದೀಗ ಸುಮಾರು 33.13 ಲಕ್ಷ ನೋಟಿಸ್ಗಳನ್ನು ನೀಡಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ವಾಯು ದಾಳಿಗೆ 28 ಉಗ್ರರು ಬಲಿ: ಪಾಕಿಸ್ತಾನ
SIR ವೇಳೆ ಮತದಾರರು ಸಲ್ಲಿಸಿದ ನ್ಯೂಮರೇಷನ್ ಫಾರ್ಮ್ನ ಮಾಹಿತಿಯನ್ನು ಹಿಂದಿನ 2002ರ SIR ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಹಲವು ಪ್ರಕರಣಗಳಲ್ಲಿ ಹೆಸರು ಅಥವಾ ಕಾಗದಪತ್ರಗಳ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಕೆಲವು ಮತದಾರರ ಪ್ರಸ್ತುತ ದಾಖಲೆಗಳು 2002ರ ಪಟ್ಟಿಯೊಂದಿಗೆ ಮ್ಯಾಪ್ ಆಗಿಲ್ಲ. ಇಂತಹ ಪ್ರಕರಣಗಳನ್ನು ‘ಅನ್ಮ್ಯಾಪ್ಡ್’ ಎಂದು ಪರಿಗಣಿಸಿ, ನೋಟಿಸ್ ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯುಕ್ತ ಎಸ್.ಎಸ್. ಸಂಧು ಅವರಿಗೆ ದೆಹಲಿ ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ನೋಟಿಸ್ ನೀಡಲಾಗಿತ್ತು. ಅವರ ಹೆಸರಿನಲ್ಲಿ ಕಂಡುಬಂದ ವ್ಯತ್ಯಾಸವೇ ನೋಟಿಸ್ಗೆ ಕಾರಣವಾಗಿದೆ. ನಂತರ ಅವರು ಸಲ್ಲಿಸಿದ ವಿವರಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಅವರ ಮತದಾರರ ದಾಖಲೆಯನ್ನು ಮಾನ್ಯಗೊಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲು ಇರಿಸಲಾಗಿದೆ. ಅಂತಿಮ ಪಟ್ಟಿ ನವೆಂಬರ್ 4ರಂದು ಪ್ರಕಟವಾಗಲಿದೆ.ಇದನ್ನೂ ಓದಿ: ಯುಪಿಎ ರಚಿಸಿದ ಗಾಡ್ಗೀಳ್ ವರದಿಯೇ ಇಂದಿನ ಸಮಸ್ಯೆಗೆ ಮೂಲ: ಅಶೋಕ್ ವಾಗ್ದಾಳಿ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಮಾಜಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಮಾಜಿ ಜೆಎನ್ಯು ಕುಲಪತಿ ಎಂ. ಜಗದೀಶ್ ಕುಮಾರ್, ಮಾಜಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪನಗಢಿಯಾ, ಸೆಬಿ ಅಧ್ಯಕ್ಷ ತುಹಿನ್ ಕಾಂತ ಪಾಂಡೆ, ಮಾಜಿ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸೇರಿದಂತೆ ಹಲವು ಗಣ್ಯರ ಹೆಸರುಗಳು ನೋಟಿಸ್ ಪಡೆದವರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
SIR ನೋಟಿಸ್ ಬಂದಿರುವುದರಿಂದ ಮತದಾರರ ಪಟ್ಟಿಯಿಂದ ಹೆಸರು ಅಂತಿಮವಾಗಿ ತೆಗೆದುಹಾಕಲಾಗಿದೆ ಎಂದರ್ಥವಲ್ಲ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ. ಹೆಸರು ತೆಗೆದುಹಾಕುವ ಮೊದಲು ಸಂಬಂಧಪಟ್ಟ ಮತದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಕಾರಣಸಹಿತ ಹಾಗೂ ಮೇಲ್ಮನವಿ ಮಾಡಬಹುದಾದ ಆದೇಶ ಹೊರಡಿಸಲಾಗುತ್ತದೆ.
ಕರಡು ಪಟ್ಟಿಯಿಂದ 47 ಲಕ್ಷಕ್ಕೂ ಹೆಚ್ಚು ಹೆಸರುಗಳು ಹೊರಗೆ
SIR ಅಡಿಯಲ್ಲಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ 47 ಲಕ್ಷಕ್ಕೂ ಹೆಚ್ಚು ಹೆಸರುಗಳು ಹೊರಬಿದ್ದಿವೆ. ಆದರೆ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಅಂತಿಮ ನಿರ್ಧಾರವಲ್ಲ. ಅರ್ಹ ಮತದಾರರು ತಮ್ಮ ಹೆಸರು ಸೇರಿಸಲು ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಬಹುದು.ಇದನ್ನೂ ಓದಿ: ಸೇತುವೆ ತಡೆಗೋಡೆಗೆ ಕ್ಯಾಬ್ ಡಿಕ್ಕಿ – ಇಂಡಿಗೋ ಕ್ಯಾಬಿನ್ ಸಿಬ್ಬಂದಿ ದುರ್ಮರಣ

