ಪ್ರೀತಿಯ ಗೆಳತಿ
ನೀನಂತೂ ನನಗೆ ಸಿಗಲಿಲ್ಲ.. ಆದರೆ, ನಿನ್ನ ಮೇಲಿಟ್ಟ ಪ್ರೀತಿಯೆಲ್ಲ ಇಂದಿಗೂ ಹಾಗೆಯೇ ನನ್ನ ಎದೆಯೊಳಗೆ ಮಾಸದೆ ಉಳಿದಿದೆ. ಕಾಲ ಎಷ್ಟೇ ಮುಂದೆ ಸಾಗಿದರೂ, ಬದುಕು ಎಷ್ಟೇ ಬದಲಾದರೂ, ನಿನ್ನ ನೆನಪುಗಳಿಗೆ ಮಾತ್ರ ವಿದಾಯ ಹೇಳಲು ನನ್ನಿಂದ ಸಾಧ್ಯವಾಗಲೇ ಇಲ್ಲ. ನಿನ್ನನ್ನು ಮರೆಯಬೇಕೆಂದು ಎಷ್ಟೋ ಬಾರಿ ಮನಸ್ಸಿಗೆ ಹೇಳಿಕೊಂಡಿದ್ದೇನೆ. ಆದರೆ, ಪ್ರೀತಿ ಅನ್ನೋದು ಮರೆತುಬಿಡು ಎಂದ ತಕ್ಷಣ ಮರೆಯಾಗುವ ನೆನಪಲ್ಲವಲ್ಲ!
ನಿನಗೆ ಗೊತ್ತಾ, ಇಂದಿಗೂ ನನ್ನ ಎದೆಯ ಪುಟಗಳಲ್ಲಿ ಅದೆಷ್ಟೋ ಕವಿತೆಗಳು ತುದಿಗಾಲಲ್ಲಿ ನಿಂತಿವೆ. ನಿನ್ನ ಸೌಂದರ್ಯವನ್ನು ಹೊಗಳಲು, ನಿನ್ನ ನಗುವನ್ನು ವರ್ಣಿಸಲು, ನಿನ್ನ ಕಣ್ಣಲ್ಲಿನ ಕನಸುಗಳನ್ನು ಅಕ್ಷರಗಳಲ್ಲಿ ಬಂಧಿಸಲು ಉಳಿಸಿಕೊಂಡ ಕವಿತೆಗಳವು. ಆದರೆ ಆ ಕವಿತೆಗಳನ್ನು ಓದಿ ನಾಚಿ ನಗಬೇಕಿದ್ದ ನೀನೇ ನನ್ನ ಬಳಿ ಇಲ್ಲ. ಇದನ್ನೂ ಓದಿ: ನಿನ್ನೂರಿನ ದಾರಿಯಲ್ಲಿ ಬೀಸುವ ಗಾಳಿ ನಿನ್ನ ಆಲಿಂಗನವ ನೆನಪಿಸುತ್ತಿದೆ..!
ಹಬ್ಬ ಹರಿದಿನಗಳು ಬಂದಾಗ ನೀನು ರೇಷ್ಮೆ ಸೀರೆ ಉಟ್ಟು, ಕೈತುಂಬ ಬಳೆ ತೊಟ್ಟು, ಮಲ್ಲಿಗೆ ಹೂ ಮುಡಿದು ನನ್ನ ಕಣ್ಣೆದುರು ಓಡಾಡುವಾಗ, ನೀನು ನನಗೆ ಸಿಗದ ಹುಡುಗಿಯಲ್ಲ, ನನ್ನ ಪ್ರೀತಿಯನ್ನು ಒಪ್ಪಿಕೊಂಡು ನನ್ನ ಜೊತೆಗಿರುವವಳು ಅನ್ನಿಸಿಬಿಡುತ್ತದೆ! ನಿನ್ನನ್ನು ನೋಡುತ್ತಲೇ ಮನಸ್ಸು ಹಳೆಯ ಕನಸುಗಳನ್ನೆಲ್ಲ ಮತ್ತೆ ತೆರೆದಿಡುತ್ತದೆ. ಇನ್ನೇನೂ ನೀನು ನನ್ನ ಬಳಿ ಬಂದು ನಗುತ್ತಾ ಮಾತನಾಡುತ್ತೀಯೇನೋ, ಮತ್ತೆ ನನ್ನ ಬದುಕಿಗೆ ಮರಳುತ್ತೀಯೇನೋ ಎಂಬ ಆಸೆ ಚಿಗುರೊಡೆಯುತ್ತದೆ. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಆ ಕ್ಷಣಗಳು ಮುಗಿದು ನೀನು ದೂರ ಸರಿದಾಗ ವಾಸ್ತವ ಮತ್ತೆ ನನ್ನೆದುರು ನಿಂತಿರುತ್ತದೆ. ನೀನು ನನ್ನವಳಲ್ಲ ಎಂಬ ಸತ್ಯವನ್ನು ಮನಸ್ಸು ಮತ್ತೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆ. ನೀನಿಲ್ಲ ಎನ್ನುವ ನೋವಿಗಿಂತ, ನನ್ನ ಬದುಕಿನ ಸುಂದರ ನೆನಪುಗಳಲ್ಲಿ ನೀನು ಸದಾ ಇರ್ತಿಯಲ್ಲ ಎಂಬ ಖುಷಿಯೇ ಹೆಚ್ಚಾಗುತ್ತದೆ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ನಿನ್ನ ನೆನಪುಗಳಿಂದಲೇ ಎಷ್ಟೋ ಕವಿತೆಗಳು ಹುಟ್ಟಿವೆ, ನಿನ್ನಿಂದ ಬದುಕಿಗೊಂದು ಅರ್ಥ ಸಿಕ್ಕಿದೆ. ಬಹುಶಃ ಕೆಲವು ಪ್ರೇಮಗಳು ಜೊತೆಯಾಗಿ ಬದುಕುವುದಕ್ಕಲ್ಲ, ಜೀವನವಿಡೀ ನೆನಪಾಗಿ ಉಳಿಯುವುದಕ್ಕೆ ಹುಟ್ಟಿರುತ್ತವೆ ಅನಿಸುತ್ತದೆ. ನೀನು ನನ್ನ ಕೈ ಹಿಡಿದು ನಡೆಯದಿದ್ದರೂ, ನನ್ನ ಹೃದಯದ ದಾರಿಯಲ್ಲಿ ಸದಾ ಇದ್ದೇ ಇರ್ತಿಯ. ಯಾಕಂದ್ರೆ, ನಿನ್ನನ್ನು ಪ್ರೀತಿಸಿದ ಹೃದಯ ನಿನ್ನಿಂದ ದೂರವಾಗಲು ಕಲಿತಿಲ್ಲ! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ,
ನಿನ್ನನ್ನು ಪಡೆಯಲಾಗದಿದ್ದರೂ,
ಪ್ರೀತಿಸುವುದನ್ನು ನಿಲ್ಲಿಸಲಾಗದ ಭಗ್ನ ಪ್ರೇಮಿ

