– ತಂದೆಯಾಗಿ ಇದು ನನಗೆ ಹೆಮ್ಮೆಯ ಕ್ಷಣ: ಅಶೋಕ್
ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ವರಾಜ್ ದ್ವೀಪ್‌ನಲ್ಲಿ ಸಮುದ್ರದ (Andaman Sea) ನೀರಿನಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜ (Indian Flag) ಹಾರಿಸುವ ಮೂಲಕ ಐತಿಹಾಸಿಕ ಸಾಧನೆಯಲ್ಲಿ ಭಾಗಿಯಾದ ಬೆಂಗಳೂರಿನ ಶರತ್ ಅಶೋಕ್ (Sharath Ashok) ಅವರನ್ನು ಅಂಡಮಾನ್ ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ.ಜೋಶಿ ಸನ್ಮಾನಿಸಿದರು.

ಲೋಕ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಲೆಪ್ಟಿನೆಂಟ್ ಗರ್ವನರ್ ಅಡ್ಮಿರಲ್ ಡಿ.ಕೆ.ಜೋಶಿ, ಶರತ್ ಅಶೋಕ್ ಅವರಿಗೆ ನೀಡಿ ಸನ್ಮಾನಿಸಿದರು. 2026 ರ ಮೇ 2 ರಂದು ಅಂಡಮಾನ್-ನಿಕೋಬಾರ್‌ನ ಸ್ವರಾಜ್ ದ್ವೀಪದ (ಹ್ಯಾವ್ಲಾಕ್ ದ್ವೀಪ) ಬಳಿ ಸುಮಾರು 200 ಸ್ಕೂಬಾ ಡೈವರ್‌ಗಳು ಭಾರತದ ತ್ರಿವರ್ಣ ಧ್ವಜವನ್ನು ಹೊತ್ತೊಯ್ದು ಅದನ್ನು ಸಮುದ್ರದ ನೀರಿನೊಳಗಿಟ್ಟು ಅನಾವರಣ ಮಾಡಿದ್ದರು. 60×40 ಮೀಟರ್ (2,400 ಚದರ ಮೀಟರ್) ವಿಸ್ತೀರ್ಣದ ಈ ಧ್ವಜವನ್ನು ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಅರಣ್ಯ ಪಡೆಯ ನೆರವಿನೊಂದಿಗೆ ಡೈವರ್‌ಗಳು ಸಮುದ್ರಕ್ಕೆ ಹೊತ್ತೊಯ್ದಿದ್ದರು. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಬೃಹತ್ ಧ್ವಜವನ್ನು ಸಮುದ್ರದ ನೀರಿನಲ್ಲಿ ಪ್ರದರ್ಶನ ಮಾಡಿದ ದಾಖಲೆ ಸೃಷ್ಟಿಯಾಯಿತು. ಇದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಇದನ್ನೂ ಓದಿ: ಉಗ್ರವಾದಕ್ಕೆ ಆಶ್ರಯ ನೀಡುವ ರಾಷ್ಟ್ರಕ್ಕೆ ಸಿಂಧೂ ಜಲ ಒಪ್ಪಂದ ಅಮಾನತುಗೊಳಿಸುವುದು ನಿರ್ಣಾಯಕ: ರಾಷ್ಟ್ರಪತಿ

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok), ಶರತ್‌ನ ತಂದೆಯಾಗಿ ನನಗೆ ಈ ಬಗ್ಗೆ ಬಹಳ ಹೆಮ್ಮೆ ಉಂಟಾಗಿದ್ದು, ಇದು ಅತ್ಯಂತ ಭಾವುಕ ಕ್ಷಣವಾಗಿದೆ. ನನ್ನ ಮಗ ಸ್ವರಾಜ್ ದ್ವೀಪದಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಅನಾವರಣ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅದು ಗಿನ್ನೆಸ್ ವಿಶ್ವ ದಾಖಲೆಗೆ ಸೇರಿರುವುದು ಹಾಗೂ ಲೋಕ ನಿವಾಸದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಆಡಳಿತದಿಂದ ಸನ್ಮಾನ ಪಡೆದಿರುವುದು ಹೆಮ್ಮೆಯ ಸಂಗತಿ. ಸಾಗರದಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಗಿನ್ನೆಸ್ ವಿಶ್ವ ದಾಖಲೆ ಮಾಡಲು ನನ್ನ ಮಗ ಹಾಗೂ ಇಡೀ ತಂಡದವರು ಅಸಾಧಾರಣ ಧೈರ್ಯ, ಸಮರ್ಪಣೆ, ಶಿಸ್ತು ಮತ್ತು ಶ್ರಮ ವಹಿಸಿದ್ದರು ಎಂದು ಶ್ಲಾಘಿಸಿದ್ದಾರೆ.

ನನ್ನ ಮಗ ರಾಷ್ಟ್ರಕ್ಕೆ ಹೆಮ್ಮೆ ತರುವ ಸಾಧನೆಗೆ ಕೊಡುಗೆ ನೀಡಿರುವುದನ್ನು ನೋಡುವುದು ಎಂದರೆ ಅದು ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಯಾಗಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗುಟ್ಕಾ, ಪಾನ್ ಮಸಾಲ ಬ್ಯಾನ್ ಆದೇಶ ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ
