– ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ ಆಗಲ್ಲ
– ಗುಟ್ಕಾಗೆ ನಮ್ಮ ದೇಶದ ಅಡಿಕೆ ಬಳಕೆ ಮಾಡಲ್ಲ ಅಂತ ಆರೋಗ್ಯ ಸಚಿವರ ಸ್ಪಷ್ಟನೆ
ಬೆಂಗಳೂರು: ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶವನ್ನು ನಾವು ವಾಪಸ್ ಪಡೆದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾನ್ ಮಸಾಲದಲ್ಲಿ ನಿಕೊಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಏನೂ ಸಮಸ್ಯೆ ಆಗುವುದಿಲ್ಲ. ನಾನು ಆ ಆದೇಶವನ್ನು ವಾಪಸ್ ಪಡೆದಿಲ್ಲ. ಪಾನ್ ಮಸಾಲದಲ್ಲಿ ನಿಕೊಟಿನ್ ಇರಬಾರದು ಎಂಬ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದಾಗಿ ಅಡಿಕೆಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಇಲಾಖೆ, ಸರ್ಕಾರ ಅಡಿಕೆ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಹಿಂದೆಯೂ ಮಾಡಿಲ್ಲ, ಈಗಲೂ ಮಾಡಲ್ಲ, ಮುಂದೆನೂ ಮಾಡುವುದಿಲ್ಲ. ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಈ ತೀರ್ಮಾನದಿಂದ ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಗುಟ್ಕಾಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ನೇಪಾಳ, ಬಾಂಗ್ಲಾದಿಂದ ಆಮದು ಮಾಡಿ ಬಳಕೆ ಮಾಡುತ್ತಾರೆ. ಗುಟ್ಕಾ ನಿಕೊಟಿನ್ ನಿಷೇಧದಿಂದ ಬೆಲೆ ಹೆಚ್ಚಾಗುವ ಸಾಧ್ಯತೆನೇ ಹೆಚ್ಚಿದೆ. ಆವತ್ತು ನಾನು ಗುಟ್ಕಾ ನಿಷೇಧ ಮಾಡುವಾಗ ಇದೇ ವಿಚಾರ ಮುನ್ನಲೆಗೆ ಬಂದಿತ್ತು. ಆಗ ನಾನು ಬಲವಾಗಿ ಅದನ್ನು ಸಮರ್ಥಿಸಿಕೊಂಡಿದ್ದೆ. ಸಿಎಂ ಕೂಡ ಸಮರ್ಥಿಸಿದ್ದರು. ಅಡಿಕೆ ಬೆಲೆ ಕುಸಿತ ಆಗುವುದಿಲ್ಲ ಎಂದಿದ್ದೆವು. ಮೂರು ತಿಂಗಳು ಆದ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು. ಆದ ಕಾರಣ ಪಾನ್ ಮಸಾಲದಲ್ಲಿ ನಿಕೊಟಿನ್ ಇರಬಾರದು ಎಂಬ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅಡಿಕೆ ವ್ಯಾಪಾರಿಗಳಿಗೂ ಯಾವುದೇ ತೊಂದರೆ ಇಲ್ಲ ಎಂದರು.
ಮೂರು ತಿಂಗಳು ಸಮಯಾವಕಾಶ ಕೊಟ್ಟು ನೋಡಿ. ಸಿಎಂ ಅವರು ಈ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಸಿಎಂಗೆ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ತೀರ್ಮಾನ ಅಂದಿದ್ದಾರೆ. ಸಿಎಂ ಬೆಳೆಗಾರರಿಗೆ ಯಾವುದೇ ತೊಂದರೆ ಆಗಬಾರದು ಎಂದು ತಿಳಿಸಿದ್ದಾರೆ. ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ. ಮೂರು ತಿಂಗಳ ಬಳಿಕ ಅದರ ಫಲಿತಾಂಶ ನೋಡಿ. ನಾನು ಆದೇಶ ಮಾಡಿದ್ದು ಮಾತ್ರ. ಅದನ್ನು ವಾಪಸು ಪಡೆದಿಲ್ಲ. ಈಗ ಅಡಿಕೆ ಬೆಳೆಗಾರರಿಗೆ ನಾವು ಹೇಳಿದರೆ ಅವರಿಗೆ ಅರ್ಥ ಆಗಲ್ಲ. ಅವರು ಹೇಳುವುದು ನಮಗೆ ಅರ್ಥ ಆಗುವುದಿಲ್ಲ. ಸ್ವಲ್ಪ ಬಿಟ್ಟು ಬಿಡಿ. ಒಂದು ತಿಂಗಳ ನಂತರ ಅವರಿಗೆ ನಷ್ಟ ಆದರೆ ಚರ್ಚೆ ಮಾಡಬೇಕು. ನಮ್ಮ ಸರ್ಕಾರ ಅಡಿಕೆ ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಆಗಲು ಬಿಡುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

