– 80ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ನವದೆಹಲಿ: ಉಗ್ರವಾದಕ್ಕೆ ಆಶ್ರಯ ನೀಡುವ ರಾಷ್ಟ್ರದೊಂದಿಗೆ ಮಾಡಿಕೊಂಡಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವುದು (Indus Treaty Suspension) ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ, ವಿಶೇಷವಾಗಿ ರೈತರ ಹಿತಕ್ಕಾಗಿ ಕೈಗೊಂಡ ನಿರ್ಣಾಯಕ ಹೆಜ್ಜೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬಣ್ಣಿಸಿದರು.
80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಮುನ್ನಾದಿನವಾದ ಇಂದು ದೇಶವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಿದರು. ಭಾರತದ ರಾಷ್ಟ್ರೀಯ ಭದ್ರತೆ, ಉಗ್ರವಾದದ ವಿರುದ್ಧದ ಹೋರಾಟ, ಆರ್ಥಿಕ ಪ್ರಗತಿ, ಬಡತನ ನಿರ್ಮೂಲನೆ, ಆಹಾರ ಭದ್ರತೆ ಹಾಗೂ ನಕ್ಸಲ್‌ಮುಕ್ತ ಭಾರತದತ್ತ ಸಾಗುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿದರು.
ಉಗ್ರರು ಎಲ್ಲೂ ಬಚ್ಚಿಟ್ಟುಕೊಳ್ಳಲು ಅವಕಾಶವಿಲ್ಲ
ಭಯೋತ್ಪಾದನೆ ವಿರುದ್ಧ ಭಾರತದ (India) ನಿಲುವನ್ನು ಸ್ಪಷ್ಟಪಡಿಸಿದ ರಾಷ್ಟ್ರಪತಿ ಮುರ್ಮು, ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಅವರಿಗೆ ಬೆಂಬಲ ನೀಡುವವರು ತಮ್ಮ ಕೃತ್ಯಗಳ ಪರಿಣಾಮವನ್ನ ಎದುರಿಸಲೇಬೇಕಾಗುತ್ತದೆ. ಉಗ್ರರು ಮತ್ತು ಅವರಿಗೆ ಬೆಂಬಲ ನೀಡುವವರು ಎಲ್ಲೇ ಅಡಗಿಕೊಂಡರೂ ಪರಿಣಾಮಗಳನ್ನ ಎದುರಿಸಲೇಬೇಕಾಗುತ್ತದೆ, ಅಡಗಿಕೊಳ್ಳಲು ಅವರಿಗೆ ಅವಕಾಶವೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾಗ-2: ಮರೆಯಲಾಗದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ – ಗಾಂಧಿಯುಗದಲ್ಲಿ ಏನೆಲ್ಲಾ ಆಯ್ತು?
ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನ ಉಲ್ಲೇಖಿಸಿದ ಅವರು, ಆಪರೇಷನ್ ಸಿಂಧೂರವು ಉಗ್ರ ಜಾಲಗಳ ವಿರುದ್ಧ ನಿಖರ ದಾಳಿ ನಡೆಸುವ ಭಾರತದ ಸೇನೆಯ ಸಾಮರ್ಥ್ಯವನ್ನ ಜಗತ್ತಿಗೆ ತೋರಿಸಿದೆ ಎಂದು ಬಣ್ಣಿಸಿದರು.
ಸಿಂಧೂ ಜಲ ಒಪ್ಪಂದ ಅಮಾನತು ಏಕೆ ಮಹತ್ವದ್ದು?
ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರಿನ ಹಂಚಿಕೆಯನ್ನು ನಿಯಂತ್ರಿಸುವ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವುದನ್ನು ರಾಷ್ಟ್ರಪತಿಗಳು ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ನಿರ್ಧಾರವೆಂದು ಬಣ್ಣಿಸಿದರು.
ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕೈಗೊಂಡ ಹಲವು ಕ್ರಮಗಳ ಭಾಗವಾಗಿ ಈ ಒಪ್ಪಂದವನ್ನ ಅಮಾನತುಗೊಳಿಸಿತ್ತು. ವಿಶೇಷವಾಗಿ ದೇಶದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಕ್ಸಲ್‌ಮುಕ್ತ ಭಾರತದತ್ತ ಮಹತ್ವದ ಹೆಜ್ಜೆ
ಮುಂದುವರಿದು… ದೇಶವನ್ನು ನಕ್ಸಲ್‌ಮುಕ್ತಗೊಳಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನೂ ರಾಷ್ಟ್ರಪತಿ ಮುರ್ಮು ಪ್ರಮುಖ ರಾಷ್ಟ್ರೀಯ ಸಾಧನೆ ಎಂದು ವಿವರಿಸಿದರಲ್ಲದೇ, ದೀರ್ಘಕಾಲ ಎಡಪಂಥೀಯ ಉಗ್ರವಾದದ ಪರಿಣಾಮ ಎದುರಿಸಿದ್ದ ಬಸ್ತರ್‌ನಲ್ಲಿ ಅಭಿವೃದ್ಧಿ ವೇಗ ಪಡೆದುಕೊಂಡಿರುವುದು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿರುವುದು ಬದಲಾವಣೆಯ ಸಂಕೇತವಾಗಿದೆ ಎಂದು ಹೇಳಿದರು.

ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ
ವಿಶ್ವದ ಹಲವು ಭಾಗಗಳಲ್ಲಿ ಯುದ್ಧ, ಅಸ್ಥಿರತೆ ಮತ್ತು ಅನಿಶ್ಚಿತತೆ ಮುಂದುವರಿದಿದ್ದರೂ ಭಾರತದ ಆರ್ಥಿಕತೆ ಜಾಗತಿಕ ಸರಾಸರಿ ಬೆಳವಣಿಗೆಯ ದರಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಕಳೆದ ಒಂದು ದಶಕದಲ್ಲಿ 25 ಕೋಟಿಗೂ ಹೆಚ್ಚು ಜನರನ್ನ ಬಡತನದಿಂದ ಹೊರತರಲಾಗಿದೆ. ಅದೇ ರೀತಿ, ಸರ್ಕಾರದ ಉಚಿತ ಪಡಿತರ ಯೋಜನೆಯು ದೇಶದ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಇದನ್ನೂ ಓದಿ: Independence Day: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ
ಅಲ್ಲದೇ, ನ್ಯಾಯಾಂಗ ವ್ಯವಸ್ಥೆಯ ಜವಾಬ್ದಾರಿಯ ಬಗ್ಗೆಯೂ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಯಾವುದೇ ವ್ಯಕ್ತಿ ನ್ಯಾಯದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರ ಕರ್ತವ್ಯವಾಗಿದೆ ಕರೆ ನೀಡಿದರು.
ರಾಷ್ಟ್ರೀಯ ಭದ್ರತೆಯಿಂದ ಸಾಮಾಜಿಕ ನ್ಯಾಯದವರೆಗೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದ ಭಾಷಣದಲ್ಲಿ ಭಾರತದ ರಾಷ್ಟ್ರೀಯ ಭದ್ರತೆ, ಉಗ್ರವಾದದ ವಿರುದ್ಧದ ಹೋರಾಟ, ಪಾಕಿಸ್ತಾನದ ವಿರುದ್ಧದ ಕ್ರಮಗಳು, ಸಿಂಧೂ ಜಲ ಒಪ್ಪಂದದ ಅಮಾನತು, ಆಪರೇಷನ್ ಸಿಂಧೂರ್, ನಕ್ಸಲ್‌ಮುಕ್ತ ಭಾರತ, ಆರ್ಥಿಕ ಬೆಳವಣಿಗೆ, ಬಡತನ ನಿರ್ಮೂಲನೆ, ಆಹಾರ ಭದ್ರತೆ ಹಾಗೂ ನ್ಯಾಯದ ಲಭ್ಯತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಪ್ರಸ್ತಾಪಗೊಂಡವು.
ದೇಶದ ಹಿತಾಸಕ್ತಿಗೆ ಧಕ್ಕೆಯೊಡ್ಡುವ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ಮುಂದುವರಿಸುವುದರ ಜೊತೆಗೆ, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಸಮಾನವಾಗಿ ಮುನ್ನಡೆಸುವ ಭಾರತದ ಸಂಕಲ್ಪವನ್ನು ರಾಷ್ಟ್ರಪತಿಯ ಭಾಷಣ ಪ್ರತಿಬಿಂಬಿಸಿತು.
