Connect with us

Dakshina Kannada

ಜೂನ್ 1ರಿಂದ ದೇವಸ್ಥಾನ ಓಪನ್- ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಸಿದ್ಧತೆ

Published

on

ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ದೇವಾಲಯಗಳನ್ನು ಬಂದ್ ಮಾಡಿ ಭಕ್ತರ ಪ್ರವೇಶವನ್ನು ನಿಷೇಧ ಮಾಡಲಾಗಿತ್ತು. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಸರಕಾರ ಜೂನ್ 1ರಿಂದ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದ್ದು, ದೇವರ ದರ್ಶನ ಭಾಗ್ಯ ಮತ್ತೆ ಸಿಗಲಿದೆ.

ದೇವಾಲಯ ತೆರೆದರೂ ದೇವರ ದರ್ಶನ ಹಿಂದಿನಂತೆ ಇರದೇ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ನೀಡಿದ ಮಾರ್ಗದರ್ಶನಗಳನ್ನು ಪಾಲಿಸಬೇಕಾಗುತ್ತದೆ. ಜೂನ್ 1ರಂದು ದೇವಾಲಯಗಳಿಗೆ ಭಕ್ತರಿಗೆ ಪ್ರವೇಶ ನೀಡಿದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಎಲ್ಲಾ ಸಿದ್ಧತೆಗಳು ಮಾಡಿಕೊಂಡಿದೆ. ದೇವಸ್ಥಾನಗಳನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸುವ ಕೆಲಸ ನಡೆಯುತ್ತಿದೆ.

ಯಾವ ರೀತಿಯಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ದೇಗುಲದ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಮಂಗಳೂರಿನ ಪ್ರಸಿದ್ಧ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲೂ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಜೂನ್ 1ರಂದು ಕೊರೊನಾ ನಿರ್ಮೂಲನೆಗೆ ಕ್ಷೇತ್ರದಲ್ಲಿ ಧನ್ವಂತರಿ ಹೋಮ, ಸೀಯಾಳಾಭಿಷೇಕ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಖಜಾಂಚಿ ಪದ್ಮರಾಜ್.ಆರ್ ತಿಳಿಸಿದ್ದಾರೆ. ಅಲ್ಲದೇ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೂ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ ಎಂದಿದ್ದಾರೆ.