ಬೆಂಗಳೂರು: ಕೆ.ಆರ್. ಪುರಂನಲ್ಲಿ ಸ್ವಂತ ತಂದೆ, ತಾಯಿ ಮತ್ತು ತಂಗಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಟುಕ ಹಂತಕರಾದ ಶ್ವೇತಾ (Shwetha) ಮತ್ತು ಕೆನತ್(Kenneth) ಇಬ್ಬರೂ ಕೊಲೆಗೆ ನಿಖರವಾದ ಕಾರಣವನ್ನು ಬಾಯಿಬಿಡದ ಹಿನ್ನೆಲೆಯಲ್ಲಿ, ಅವರಿಗೆ ನಾರ್ಕೋ ಅನಾಲಿಸಿಸ್ ಟೆಸ್ಟ್ (Narco Analysis Test) ಮಾಡಿಸಲು ಕೆ.ಆರ್. ಪುರಂ ಪೊಲೀಸರು ಮುಂದಾಗಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಅವರು ತನಿಖೆ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಕಿಲ್ಲರ್ಸ್ ಗಳಾದ ಶ್ವೇತಾ ಮತ್ತು ಕೆನತ್ ಹತ್ಯೆಯ ಹಿಂದಿನ ಅಸಲಿ ಕಾರಣವನ್ನು ಮರೆಮಾಚುತ್ತಾ, ಗಂಟೆಗೊಂದು ಗಳಿಗೆಗೊಂದು ವಿಭಿನ್ನ ಕಾರಣಗಳನ್ನು ನೀಡುತ್ತಾ ಪೊಲೀಸರನ್ನೇ ಗೊಂದಲಕ್ಕೆ ದೂಡುತ್ತಿದ್ದಾರೆ. ಹೀಗಾಗಿ ಆರೋಪಿಗಳ ಮೈಂಡ್ ಗೇಮ್‌ಗೆ ಬ್ರೇಕ್ ಹಾಕಿ ಸತ್ಯ ಹೊರತೆಗೆಯಲು ಪೊಲೀಸರು ನಾರ್ಕೋ ಟೆಸ್ಟ್ ಮೊರೆ ಹೋಗಿದ್ದಾರೆ.
ಏನಿದು ನಾರ್ಕೋ ಅನಾಲಿಸಿಸ್ ಟೆಸ್ಟ್?
ವ್ಯಕ್ತಿಯಿಂದ ಅಡಗಿಸಿಟ್ಟಿರುವ ನಿಜವಾದ ಮಾಹಿತಿಯನ್ನು ಪಡೆಯಲು ಕೆಲವು ನಿರ್ದಿಷ್ಟ ಔಷಧಿಗಳನ್ನು (ಸೋಡಿಯಂ ಪೆಂಟೋಥಾಲ್‌ನಂತಹ ಸೆಡೇಟಿವ್ಸ್) ಶರೀರಕ್ಕೆ ಇಂಜೆಕ್ಟ್ ಮಾಡಿ ನಡೆಸುವ ಒಂದು ವೈಜ್ಞಾನಿಕ ವಿಚಾರಣಾ ವಿಧಾನವಿದು. ಇದನ್ನು ಆಡುಭಾಷೆಯಲ್ಲಿ ಟ್ರುತ್ ಸೀರಮ್ (Truth Serum) ಎಂದೂ ಕರೆಯಲಾಗುತ್ತದೆ. ಇದರ ಪ್ರಭಾವದಿಂದ ವ್ಯಕ್ತಿಯು ಅರೆಪ್ರಜ್ಞಾವಸ್ಥೆಗೆ ತಲುಪುತ್ತಾನೆ ಮತ್ತು ಸುಳ್ಳು ಹೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಇದನ್ನೂ ಓದಿ: ಹನಿಮೂನ್ ಹತ್ಯೆ ಕೇಸಲ್ಲಿ ಸೋನಮ್ ಎಡವಿದ್ದೆಲ್ಲಿ? – ಇಂಚಿಂಚು ಮಾಹಿತಿ ಕಲೆ ಹಾಕಿದ್ದ ಸಿಯಾ!

ಕಾನೂನು ಏನು ಹೇಳುತ್ತೆ?
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ನಾರ್ಕೋ ಅನಾಲಿಸಿಸ್, ಪಾಲಿಗ್ರಾಫ್ (ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ), ಅಥವಾ ಬ್ರೈನ್ ಮ್ಯಾಪಿಂಗ್ ಟೆಸ್ಟ್ ಮಾಡಬೇಕಾದರೆ ಆರೋಪಿಗಳ ಲಿಖಿತ ಒಪ್ಪಿಗೆ/ಅನುಮತಿ ಕಡ್ಡಾಯವಾಗಿರುತ್ತದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ನ ಸಾಕ್ಷಿಗೆ ಬೆದರಿಕೆ ಹಾಕಿ ವಾಟ್ಸಾಪ್ ಡಿಲೀಟ್ ಮಾಡಿದ್ದ ಆರೋಪಿಗಳು
ಆರೋಪಿಗಳು ಸ್ವಯಂ ಸಮ್ಮತಿ ನೀಡಿದರೂ ಸಹ, ಇಡೀ ಪ್ರಕ್ರಿಯೆ ಮತ್ತು ತನಿಖೆಯು ನ್ಯಾಯಾಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲೇ ನಡೆಯಬೇಕಾಗುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ವೈದ್ಯರು ಮತ್ತು ತಜ್ಞರ ತಂಡ ಇರುವುದು ಕಡ್ಡಾಯ.
ಮುಂದಿನ ನಡೆ ಏನು?
ಕೆ.ಆರ್. ಪುರಂ ಪೊಲೀಸರು ಶೀಘ್ರದಲ್ಲೇ ಆರೋಪಿಗಳ ಸಮ್ಮತಿ ಪಡೆದು, ನ್ಯಾಯಾಲಯಕ್ಕೆ ನಾರ್ಕೋ ಟೆಸ್ಟ್ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಕೋರ್ಟ್ ಅನುಮತಿ ನೀಡಿ ಈ ಪರೀಕ್ಷೆ ಯಶಸ್ವಿಯಾದರೆ ಹೆತ್ತವರನ್ನೇ ಕೊಂದ ಆ ಭೀಕರ ತ್ರಿವಳಿ ಕೊಲೆಯ ಹಿಂದಿನ ಅಸಲಿ ರಹಸ್ಯ ಸಂಪೂರ್ಣವಾಗಿ ಬಯಲಾಗಲಿದೆ.
