– ಬೆಂಗಳೂರಿನ ನಿವಾಸದಲ್ಲಿ 7 ಗಂಟೆ ಶೋಧ
ಲಕ್ನೋ/ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕೆಪಿಎಸ್‌ಸಿ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಮತ್ತಷ್ಟು ಚುರುಕುಗೊಳಿಸಿದ್ದು, ಇದೀಗ ಉತ್ತರ ಪ್ರದೇಶದ ಲಕ್ನೋಗೂ(Lucknow) ಲಗ್ಗೆ ಇಟ್ಟಿದೆ.
ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್(Gyanendra Kumar) ಬೆನ್ನತ್ತಿದ ಅಧಿಕಾರಿಗಳು ಲಕ್ನೋದ ಹಳ್ಳಿಯೊಂದರಲ್ಲಿರುವ ಅವರ ನಿವಾಸದ ಮೇಲೂ ದಿಢೀರ್ ದಾಳಿ ನಡೆಸಿದ್ದಾರೆ. ಆದರೆ ಬೆಂಗಳೂರಿನ ಮನೆಯಂತೆ ಲಕ್ನೋದ ನಿವಾಸದಿಂದಲೂ ಗ್ಯಾನೇಂದ್ರ ಪರಾರಿಯಾಗಿದ್ದಾರೆ.
ಇಡಿ ಅಧಿಕಾರಿಗಳು ಮನೆ ಪ್ರವೇಶಿಸಿದ ವೇಳೆ ಅಲ್ಲಿ ಗ್ಯಾನೇಂದ್ರ ಅವರ ವಯೋವೃದ್ಧ ತಂದೆ ಹಾಗೂ ಒಬ್ಬ ಕೇರ್‌ಟೇಕರ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಗ್ಯಾನೇಂದ್ರ ಮಾತ್ರವಲ್ಲದೆ ಅವರ ಪ್ರಮುಖ ಕುಟುಂಬ ಸದಸ್ಯರು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಗ್ಯಾನೇಂದ್ರ ಅವರ ತಾಯಿ ಈಗಾಗಲೇ ನಿಧನರಾಗಿದ್ದಾರೆ. ಇಡಿ ಗ್ಯಾನೇಂದ್ರ ಅವರ ಸಹೋದರು, ಚಿಕ್ಕಪ್ಪ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಆದರೆ ಅವರೂ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.
ಗ್ಯಾನೇಂದ್ರ ಹಾಗೂ ಅವರ ಕುಟುಂಬಸ್ಥರ ಈ ನಿಗೂಢ ನಡೆ ಮತ್ತು ಪಲಾಯನದಿಂದಾಗಿ ಇಡಿ ಅಧಿಕಾರಿಗಳಿಗೆ ಹಗರಣದ ಬೇರುಗಳು ಮತ್ತಷ್ಟು ಆಳವಾಗಿರುವ ಬಗ್ಗೆ ಅನುಮಾನ ಪ್ರಬಲವಾಗಿದೆ.
7 ಗಂಟೆಯಲ್ಲಿ ಅಂತ್ಯ
ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಗ್ಯಾನೇಂದ್ರ ನಿವಾಸದ ಮೇಲೆ ಭಾನುವಾರ ಸಂಜೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯವನ್ನು ಕೇವಲ 7 ಗಂಟೆಯಲ್ಲಿ ಅಂತ್ಯಗೊಳಿಸಿದ್ದರು. ಇದನ್ನೂ ಓದಿ: Exclusive | 80 ಲಕ್ಷಕ್ಕೆ ಪಶುವೈದ್ಯಾಧಿಕಾರಿ ಹುದ್ದೆಯ ಪ್ರಶ್ನೆಪತ್ರಿಕೆ ಸೇಲ್; ದಾವಣಗೆರೆ ರೆಸಾರ್ಟ್‌ನಲ್ಲಿ ಟ್ರೈನಿಂಗ್
ದಾಳಿ ವೇಳೆ ಮನೆಯಲ್ಲಿ ಹಳೆಯ ಬಟ್ಟೆ ಹಾಗೂ ಫರ್ನಿಚರ್‌ಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಆಸ್ತಿ ದಾಖಲೆಗಳು ಅಥವಾ ಡಿಜಿಟಲ್ ಪುರಾವೆಗಳು ಅಧಿಕಾರಿಗಳಿಗೆ ಸಿಕ್ಕಿಲ್ಲ. ಇಡೀ ಮನೆಯನ್ನು ಜಾಲಾಡಿದ ಇಡಿ ಅಧಿಕಾರಿಗಳು ಕೊನೆಗೆ ಮಹಜರು ಪ್ರಕ್ರಿಯೆ ಮುಗಿಸಿ ಬರಿಗೈಯಲ್ಲಿ ವಾಪಸಾಗಿದ್ದಾರೆ.
ಮಹಜರು ಪ್ರಕ್ರಿಯೆ ವೇಳೆ ಸಾಕ್ಷಿ ಸಹಿ ಹಾಕಲು ಅಕ್ಕಪಕ್ಕದ ಮನೆಯವರು ಕೂಡ ನಿರಾಕರಿಸಿದ್ದು, ಗ್ಯಾನೇಂದ್ರನ ಪತ್ತೆಗಾಗಿ ತನಿಖಾ ತಂಡಗಳು ಬಲೆ ಬೀಸಿವೆ.
ಗ್ಯಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿಯಲ್ಲಿ ಎಕ್ಸಾಂ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದರು. ಪಶುವೈದ್ಯಾಧಿಕಾರಿ ಪರೀಕ್ಷೆ, ಕೆಎಎಸ್ ಎಕ್ಸಾಂ ಅನ್ನು ಕೂಡ ನಡೆಸಿದ್ದರು. ಕೆಎಎಸ್ ಪರೀಕ್ಷೆ ಅಕ್ರಮ ಆರೋಪದ ಮೇಲೆ ಶಾಂತ ಹೊಸಮನಿ ವಿರುದ್ಧ ಎಫ್‌ಐಆರ್ ಆಗಿತ್ತು. ಇಡಿ ಕೂಡ ಶಾಂತ ಹೊಸಮನಿ ಅವರ ಮನೆ ಮೇಲೆ ದಾಳಿ ನಡೆಸಿತ್ತು.
ತರಾತುರಿಯಲ್ಲಿ ಏರ್ ಟಿಕೆಟ್ ಬುಕ್ ಮಾಡಿದ್ದ ಗ್ಯಾನೇಂದ್ರ ಆಗಸ್ಟ್ 20 ರಂದೇ ದೆಹಲಿಗೆ ತೆರಳಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯ ಫ್ಲೈಟ್‌ಗೆ 1 ಗಂಟೆ 31 ನಿಮಿಷಕ್ಕೆ ಟಿಕೆಟ್ ಬುಕ್ಕಿಂಗ್ ಆಗಿತ್ತು. ಒಂದೂವರೆ ಗಂಟೆ ಮುಂಚಿತವಾಗಿ ಗ್ಯಾನೇಂದ್ರ ಕುಮಾರ್ 30,253 ರೂಪಾಯಿ ಹಣ ನೀಡಿ ತರಾತುರಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ಕಾರಣ ಹಲವು ಪ್ರಶ್ನೆಗಳು ಎದ್ದಿದೆ.

