ಮಡಿಕೇರಿ: ಮಂಜಿನ ನಗರಿ ಮಡಿಕೇರಿ ದಸರಾ (Madikeri Dasara) ಆಚರಣೆಯ ದಿನಾಂಕದ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದ್ದು, ಅ.21ಕ್ಕೆ ಮಡಿಕೇರಿ ದಸರಾ ಆಚರಿಸಲು ನಿರ್ಧರಿಸಲಾಗಿದೆ.
ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ನಡೆದ ತುರ್ತು ಸಭೆಯಲ್ಲಿ ದಸರಾ ಆಚರಣೆ, ಕರಗ ಹಾಗೂ ಶೋಭಾಯಾತ್ರೆಯ ದಿನಾಂಕಗಳ ಬಗ್ಗೆ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನಂದಿ ಮೆಡಿಕಲ್ ಕಾಲೇಜು ಓಪಿಡಿ ಬ್ಲಾಕ್ಗೆ ಸುಧಾಕರ್ ತಾಯಿ ಹೆಸರಿಡಿ: ಪ್ರದೀಪ್ ಈಶ್ವರ್ ಮನವಿ
ಮಂಜಿನ ನಗರಿ ಮಡಿಕೇರಿ ದಸರಾ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯ. ಕರಗ ಮಹೋತ್ಸವದ ಮೂಲಕ ಆರಂಭವಾಗುವ ದಸರಾ ಆಚರಣೆ, ಬಳಿಕ ವಿವಿಧ ಪೂಜೆಗಳು, ಶೋಭಾಯಾತ್ರೆ ಹಾಗೂ ಬನ್ನಿ ಕಡಿಯುವ ಕಾರ್ಯಕ್ರಮದೊಂದಿಗೆ ಸಂಪನ್ನವಾಗುತ್ತದೆ.
ದಸರಾ ಮಹೋತ್ಸವಕ್ಕೆ ಅ.11ರಂದು ಕರಗದ ಮೂಲಕ ಚಾಲನೆ ದೊರೆಯಲಿದೆ. ಬನ್ನಿ ಮಂಟಪದಲ್ಲಿ ಕರಗಕ್ಕೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಿ, ಅಲ್ಲಿಂದ ಕರಗ ಮಹೋತ್ಸವ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಸಂಪ್ರದಾಯದಂತೆ ಕರಗದ ವಿಶೇಷ ಪೂಜೆಗಳು ನಡೆಯಲಿವೆ. ಅ.21ರಂದು ದಸರಾ ಜೊತೆಗೆ ಶೋಭಾಯಾತ್ರೆ ಕೂಡ ನಡೆಯಲಿದೆ. ದಸರಾ ಆಚರಣೆಯ ಮರುದಿನ, ಅಂದರೆ ಅ.22ರಂದು ಬೆಳಗಿನ ಜಾವ ಬನ್ನಿ ಕಡಿಯುವ ಕಾರ್ಯಕ್ರಮ ನಡೆಯಲಿದೆ.ಇದನ್ನೂ ಓದಿ: ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ಪೂರೈಕೆ ಸ್ಥಗಿತಗೊಳಿಸಿದ ಸೌದಿ – ಬೆಲೆ ಏರಿಕೆಯಿಂದ ಮತ್ತಷ್ಟು ಒತ್ತಡ!
ಈ ಬಾರಿ ಅಧಿಕ ಮಾಸದ ಹಿನ್ನೆಲೆ ದಸರಾ ಯಾವ ದಿನ ಆಚರಿಸಬೇಕು ಎಂಬ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ ಈ ಸಂಬಂಧ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ತುರ್ತು ಸಭೆ ನಡೆಸಲಾಯಿತು. ನಾಲ್ಕು ಶಕ್ತಿ ದೇವತೆಗಳ ಅರ್ಚಕರು, ದೇವಾಲಯದ ಪ್ರಮುಖರು ಹಾಗೂ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿ ದಸರಾ ಆಚರಣೆಯ ದಿನಾಂಕದ ಕುರಿತು ಚರ್ಚೆ ನಡೆಸಿದರು.
ಈ ಆಚರಣೆಗಳು ಹೊಸದಾಗಿ ರೂಪಿಸಿಕೊಂಡಿರುವ ಕಾರ್ಯಕ್ರಮಗಳಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಈ ಬಾರಿಯೂ ದಸರಾ ಆಚರಣೆ ನಡೆಸಲು ದೇವಾಲಯದ ಪ್ರಮುಖರು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ, ಅಧಿಕ ಮಾಸದಿಂದಾಗಿ ಉಂಟಾಗಿದ್ದ ಮಡಿಕೇರಿ ದಸರಾ ದಿನಾಂಕದ ಗೊಂದಲಕ್ಕೆ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ನಡೆದ ತುರ್ತು ಸಭೆಯಲ್ಲಿ ತೆರೆ ಬಿದ್ದಿದೆ. ಈ ಮೂಲಕ ಮಡಿಕೇರಿ ದಸರಾ ಆಚರಣೆಯ ದಿನಾಂಕ ಹಾಗೂ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ದೇವಾಲಯದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್ಪೋರ್ಟ್’ ವ್ಯವಸ್ಥೆ ಪರಿಶೀಲಿಸಿದ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ

