– ಬ್ಯಾರೆಲ್‌ಗೆ 105 ಡಾಲರ್ ದಾಟಿದ ಕಚ್ಚಾ ತೈಲ ಬೆಲೆ
ರಿಯಾಧ್: ಸೌದಿ ಅರೇಬಿಯಾದ ಸರ್ಕಾರಿ ತೈಲ ಕಂಪನಿ ಸೌದಿ ಅರಾಮ್ಕೊ (Saudi Aramco), ಭಾರತದ (India) ಕೆಲವು ತೈಲ ಸಂಸ್ಕರಣಾ ಕಂಪನಿಗಳಿಗೆ (ರಿಫೈನರಿಗಳಿಗೆ) ಕಚ್ಚಾ ತೈಲ ಪೂರೈಕೆಯನ್ನ ಮುಂದಿನ ಸೂಚನೆ ವರೆಗೆ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯಿಂದ ಈಗಾಗಲೇ ಹೆಚ್ಚಿನ ಕಚ್ಚಾ ತೈಲ ಬೆಲೆ (Crude Oil Price), ಏರುತ್ತಿರುವ ಸಾಗಣೆ ವೆಚ್ಚ ಮತ್ತು ಸಾಂಪ್ರದಾಯಿಕ ತೈಲ ಪೂರೈಕೆ ಮಾರ್ಗಗಳಲ್ಲಿನ ಅಡಚಣೆಗಳನ್ನ ಎದುರಿಸುತ್ತಿರುವ ಭಾರತದ ತೈಲ ಕಂಪನಿಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾ ಭಾರತದ ಪ್ರಮುಖ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಸಂಘರ್ಷ ಆರಂಭವಾದ ನಂತರದಿಂದ ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ಸೌದಿ ಅರಾಮ್ಕೊ ಸುಮಾರು 9% ಪಾಲು ಹೊಂದಿದೆ.
ಸೌದಿ ತೈಲ ಪೂರೈಕೆಗೆ ಏಕೆ ಹೊಡೆತ?
ಗಲ್ಫ್ ಪ್ರದೇಶದಿಂದ ಕಚ್ಚಾ ತೈಲ ಸಾಗಣೆಗೆ ಎದುರಾಗಿರುವ ಸಮಸ್ಯೆಗಳೇ ಪೂರೈಕೆ ವ್ಯತ್ಯಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಹೌತಿ. ಬಂಡುಕೋರರ ದಾಳಿ ಬಳಿಕ ಸೌದಿ ಅರೇಬಿಯಾದ ಈಸ್ಟ್-ವೆಸ್ಟ್ ಪೈಪ್‌ಲೈನ್ ಅನ್ನ ಸ್ಥಗಿತಗೊಳಿಸಲಾಗಿದೆ. ಈ ಪೈಪ್‌ಲೈನ್ ಸೌದಿ ಅರೇಬಿಯಾದ ಪೂರ್ವ ಭಾಗದಿಂದ ಪಶ್ಚಿಮ ಕರಾವಳಿಯ ಬಂದರುಗಳತ್ತ ಕಚ್ಚಾ ತೈಲ ಸಾಗಿಸಲು ಪ್ರಮುಖ ಮಾರ್ಗವಾಗಿದೆ. ಇದರಿಂದ ಎಲ್ಲಾ ತೈಲ ಸಾಗಣೆಯನ್ನ ಹಾರ್ಮುಜ್ ಜಲಸಂಧಿ ಮೂಲಕವೇ ನಡೆಸುವ ಅಗತ್ಯ ಕಡಿಮೆ ಮಾಡಬಹುದು.
ಆದ್ರೆ ಇತ್ತ, ಅಮೆರಿಕ ಇರಾನ್ ನಡುವೆ ಉದ್ವಿಗ್ನತೆ ಕೂಡ ಹೆಚ್ಚಾಗಿರೋದ್ರಿಂದ ಹಾರ್ಮುಜ್ ಜಲಸಂಧಿಯಲ್ಲೂ ಸಾಗಣೆ ವ್ಯತ್ಯಯ ಉಂಟಾಗಿದೆ. ಹೀಗಾಗಿ ಸೌದಿ ಅರೇಬಿಯಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಚ್ಚಾ ತೈಲ ಕಳುಹಿಸಲು ಲಭ್ಯವಿರುವ ಪರ್ಯಾಯ ಮಾರ್ಗಗಳು ಸೀಮಿತವಾಗಿವೆ. ಇದರಿಂದ ಭಾರತದ ಸಂಸ್ಕರಣಾಗಾರಗಳಿಗೆ ತೈಲ ಪೂರೈಕೆ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ.

ಬ್ಯಾರೆಲ್‌ಗೆ 105 ಡಾಲರ್ ದಾಟಿದ ಕಚ್ಚಾ ತೈಲ ಬೆಲೆ
ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ಪ್ರಮುಖ ಆತಂಕ ಕೇವಲ ಪರ್ಯಾಯ ಕಚ್ಚಾ ತೈಲವನ್ನು ಹುಡುಕುವುದಲ್ಲ. ಬದಲಾಗಿ, ಪರ್ಯಾಯ ಪೂರೈಕೆಗಾಗಿ ಅವರು ಹೆಚ್ಚಿನ ಬೆಲೆ ಪಾವತಿಸಬೇಕಾಗುವ ಸಾಧ್ಯತೆ ಇದೆ. ಬುಧವಾರ (ನಿನ್ನೆ) ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 108 ಡಾಲರ್ ಪ್ರತಿ ಬ್ಯಾರೆಲ್‌ಗೆ ಏರಿಕೆಯಾಗಿದ್ದು, ಬಳಿಕವೂ 105 ಡಾಲರ್‌ಗಿಂತ ಹೆಚ್ಚಿನ ಬೆಲೆಯಲ್ಲೇ ವಹಿವಾಟು ನಡೆದಿದೆ.
ಭಾರತೀಯ ಸಂಸ್ಕರಣಾಗಾರಗಳು ಇತರ ತೈಲ ಉತ್ಪಾದಕ ರಾಷ್ಟ್ರಗಳಿಂದ ಕಚ್ಚಾ ತೈಲ ಖರೀದಿಸಬಹುದು. ಆದರೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಇದೇ ಮಟ್ಟದಲ್ಲಿ ಮುಂದುವರಿದರೆ, ಸೌದಿ ತೈಲ ಪೂರೈಕೆಯನ್ನ ಬದಲಿಸುವುದು ಹೆಚ್ಚಿನ ವೆಚ್ಚಕ್ಕೆ ಕಾರಣವಾಗಬಹುದು. ಇದರ ಜೊತೆಗೆ, ತೈಲ ಸಾಗಿಸುವ ಟ್ಯಾಂಕರ್‌ಗಳ ಬಾಡಿಗೆ ಮತ್ತು ಸರಕು ಸಾಗಣೆ ವೆಚ್ಚವೂ ಹೆಚ್ಚಾಗಿದ್ದು, ಕಚ್ಚಾ ತೈಲ ಆಮದಿನ ಒಟ್ಟು ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಭಾರತದ ಮೇಲೆ ಏನು ಪರಿಣಾಮ?
ದೇಶೀಯ ಇಂಧನ ಬೇಡಿಕೆಯನ್ನ ಪೂರೈಸಲು ಭಾರತ ಕಚ್ಚಾ ತೈಲ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಈ ಹೊತ್ತಿನಲ್ಲೇ ಸೌದಿ ತೈಲ ಪೂರೈಕೆ ಸ್ಥಗಿತಗೊಳಿಸಿದೆ. ಕಚ್ಚಾ ತೈಲದ ಬೆಲೆ ಮತ್ತು ಸಾಗಣೆ ವೆಚ್ಚಗಳು ಹೆಚ್ಚಿನ ಮಟ್ಟದಲ್ಲೇ ಮುಂದುವರಿದರೆ, ತೈಲ ಸಂಸ್ಕರಣಾ ಕಂಪನಿಗಳ ಸಂಸ್ಕರಣಾ ಮಾರ್ಜಿನ್‌ಗಳ ಮೇಲೆ ಒತ್ತಡ ಉಂಟಾಗಬಹುದು. ಅಷ್ಟೇ ಅಲ್ಲದೇ, ಈವ್ಯತ್ಯಯ ಮುಂದುವರಿದರೆ ಇಂಧನಗಳ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

