– ಮೋದಿ ಮೋದಿ ಅನ್ನುತ್ತಿದ್ದವರೆಲ್ಲ ಈಗ ಸೈಲೆಂಟ್ ಆಗಿದ್ದಾರೆ
ಬೆಂಗಳೂರು: ನಾನೀಗ ಮುಖ್ಯಮಂತ್ರಿ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ವಿಧಾನಸೌಧದ ಸಿಎಲ್‌ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಾನೀಗ ಮುಖ್ಯಮಂತ್ರಿ ಅಲ್ಲ. ನನ್ನ ಮಾತು ಈಗಲೂ ನಡೆಯುತ್ತೆ ಅಂತ ಬಹಳ ಜನ ಅನ್ಕೊಂಡಿದ್ದಾರೆ. ನಾನೂ ಹಾಗೇ ಅನ್ಕೊಂಡಿದ್ದೇನೆ. ಆದ್ರೆ ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಅಂತ ನನಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಎಐಸಿಸಿ ನಾಯಕರ (AICC leaders) ಜೊತೆ ಸಿದ್ದರಾಮಯ್ಯ. ಪ್ರತ್ಯೇಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ ಮಾರ್ಮಿಕ ಮಾತುಗಳನ್ನಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಸರ್ಕಾರದಲ್ಲಿ ತಮ್ಮ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ? ಅಂತ ತಮಗೆ ಮಾತ್ರ ಗೊತ್ತಿದೆ ಎಂದು ಹೇಳುವ ಮೂಲಕ ತಮ್ಮ ಸಲಹೆಗಳಿಗೆ ಮನ್ನಣೆ ಸಿಕ್ತಿಲ್ಲ ಅಂತ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಪ್ರಭುತ್ವದ ವಿರೋಧಿಗಳಿಂದ ಸಂವಿಧಾನ ಶ್ರೇಷ್ಠವಾಗಲ್ಲ. ಸ್ವಾತಂತ್ರ‍್ಯ ಬಂದು 80 ವರ್ಷ ಆದರೂ ಸಂವಿಧಾನದ ಆಶಯ ಈಡೇರಿಲ್ಲ. ಪ್ರಜಾಪ್ರಭುತ್ವ ಧ್ವಂಸ ಮಾಡೋರ ಜೊತೆಗೆ ಹೋಗಬಾರದು, ಮನುವಾದಿಗಳಿಂದ ಬದಲಾವಣೆ ಆಗೋದಿಲ್ಲ. ಮನುವಾದಿಗಳ ಜೊತೆ ನೀವು ಹೋದ್ರೆ ನಿಮಗೆ ಒಂದು ಸ್ಥಾನಮಾನ ಸಿಗಬಹುದು, ಆದ್ರೆ ಸಮಾಜದಲ್ಲಿ ಬದಲಾವಣೆ ಆಗಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಜೀವಂತ ಇದೆ. ನಾವು ಶೂದ್ರ ವರ್ಗದ ಜನ, ಬದಲಾವಣೆಯ ದಾರಿಯಲ್ಲಿ ನಡೆಯಬೇಕು ಎಂದು ಕರೆ ನೀಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ್ರು ಸಂವಿಧಾನವೇ ಕಾರಣ. ಆದ್ರೆ ಜಾತಿ ವ್ಯವಸ್ಥೆ ಬದಲಾವಣೆ ಆಗಬಾರದು ಅಂತ ಕೆಲವರು ಇದ್ದಾರೆ. ನಾನು 8 ವರ್ಷ ಸಿಎಂ ಆಗಿದ್ದಾಗ ಬದಲಾವಣೆಗೆ ಪ್ರಯತ್ನ ಪಟ್ಟೆ. SCSP-TSP ಕಾಯ್ದೆಯನ್ನ ಕೇಂದ್ರ ಸರ್ಕಾರ ಯಾಕೆ ಮಾಡಿಲ್ಲ? ಬಿಜೆಪಿಗೆ ವೋಟು ಕೊಟ್ಟು ಜನ ಕಳಿಸಿದ್ದಾರಲ್ಲಾ, ಬಹಳ ಜನ ಹುಡುಗರು ಮೋದಿ ಮೋದಿ ಅಂತಿದ್ರು, ಈಗ ಸೈಲೆಂಟ್ ಆಗಿದ್ದಾರೆ ಎಂದು ಕುಟುಕಿದ್ದಾರೆ.

