– ಡ್ರಗ್ಸ್ ರೂಲ್ಸ್‌ಗೆ ತಿದ್ದುಪಡಿ ತರಲು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಸ್ತಾವನೆ
ನವದೆಹಲಿ: ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ(Prescription Drugs) ವಿತರಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸುವ ಉದ್ದೇಶದಿಂದ ಮೆಡಿಕಲ್ ಸ್ಟೋರ್‌ಗಳಲ್ಲಿ (Medical Store) ಸಿಸಿಟಿವಿ ಕಣ್ಗಾವಲು ಕಡ್ಡಾಯಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ಪ್ರಸ್ತಾವನೆ ಮುಂದಿಟ್ಟಿದೆ. ಈ ಸಂಬಂಧ ಔಷಧ ನಿಯಮಗಳು, 1945ಕ್ಕೆ ತಿದ್ದುಪಡಿ ತರಲು ಸೆಪ್ಟೆಂಬರ್ 8 ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಕರಡು ನಿಯಮ ಜಾರಿಗೆ ಬಂದರೆ, ನೋಂದಾಯಿತ ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್ ಆಧರಿಸಿ ಔಷಧ ಮಾರಾಟ ಮಾಡುವ ಸಗಟು ವಹಿವಾಟು ಹೊರತುಪಡಿಸಿದ ಪರವಾನಗಿ ಹೊಂದಿರುವ ಔಷಧ ಮಾರಾಟ ಮಳಿಗೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸಿ ನಿರ್ವಹಿಸುವುದು ಕಡ್ಡಾಯವಾಗಲಿದೆ. ಮಾರಾಟದ ಪ್ರಕ್ರಿಯೆಯನ್ನು ಪರಿಶೀಲಿಸಲು ಸಾಧ್ಯವಾಗುವ ರೀತಿಯಲ್ಲಿ ಸಿಸಿಟಿವಿ ವ್ಯವಸ್ಥೆ ಇರಬೇಕು ಎಂದು ಪ್ರಸ್ತಾವಿಸಲಾಗಿದೆ.
ಮೆಡಿಕಲ್ ಸ್ಟೋರ್‌ಗಳಲ್ಲಿ ದಾಖಲಾಗುವ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳ ಕಾಲ ಸಂರಕ್ಷಿಸಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ. ಇದರಿಂದ ಪ್ರಿಸ್ಕ್ರಿಪ್ಷನ್ ಔಷಧಗಳ ಮಾರಾಟಕ್ಕೆ ಸಂಬಂಧಿಸಿದಂತೆ ನಂತರದ ಹಂತದಲ್ಲಿ ಪರಿಶೀಲನೆ ನಡೆಸಲು ಹಾಗೂ ನಿಯಮ ಉಲ್ಲಂಘನೆಗಳಿದ್ದಲ್ಲಿ ವಹಿವಾಟನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ. ಇದನ್ನೂ ಓದಿ: ಜನನ–ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ; ಅಕ್ಟೋಬರ್ 1ರಿಂದ ಜಾರಿ

H, H1, X ಔಷಧಗಳ ಮೇಲೆ ನಿಗಾ
ಅನಧಿಕೃತವಾಗಿ H, H1 ಮತ್ತು X ಔಷಧಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಈ ಪ್ರಸ್ತಾವನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ವಿಶೇಷವಾಗಿ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಹಾಗೂ ನಿಯಂತ್ರಿತ ಔಷಧಗಳ ಮಾರಾಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ವಿಚಾರವನ್ನು ಔಷಧ ನಿಯಂತ್ರಣ ವ್ಯವಸ್ಥೆಯ ತಜ್ಞ ಸಮಿತಿಗಳಲ್ಲೂ ಚರ್ಚಿಸಲಾಗಿತ್ತು. ಔಷಧ ಸಲಹಾ ಸಮಿತಿ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಸಿಟಿವಿ ಅಳವಡಿಕೆಯನ್ನು ನಿಯಮ ತಿದ್ದುಪಡಿ ಮೂಲಕ ಕಡ್ಡಾಯಗೊಳಿಸುವ ಸಾಧ್ಯತೆಯನ್ನು ಒಪ್ಪಿಕೊಂಡಿತ್ತು. ಬಳಿಕ ಔಷಧ ತಾಂತ್ರಿಕ ಸಲಹಾ ಮಂಡಳಿ ಮಟ್ಟದಲ್ಲೂ ಪ್ರಸ್ತಾವನೆ ಪರಿಗಣನೆಯಾಗಿದೆ.
ಸದ್ಯ ಸಿಸಿಟಿವಿ ಕಡ್ಡಾಯಗೊಳಿಸುವ ಪ್ರಸ್ತಾವನೆ ಇನ್ನೂ ಜಾರಿಗೆ ಬಂದಿಲ್ಲ. ಇದು ಕರಡು ನಿಯಮವಾಗಿದ್ದು, ಸಾರ್ವಜನಿಕರು ಹಾಗೂ ಸಂಬಂಧಿತ ವಲಯಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಕರಡು ಅಧಿಸೂಚನೆಯ ಪ್ರಕಟಣೆಯಿಂದ 30 ದಿನಗಳ ಬಳಿಕ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಂತಿಮ ಅಧಿಸೂಚನೆಯಲ್ಲಿ ಸರ್ಕಾರ ಸೂಚಿಸುವ ದಿನಾಂಕದಿಂದ ಮಾತ್ರ ನಿಯಮ ಜಾರಿಗೆ ಬರಲಿದೆ.

