– ಇಡಿ ಮೂಲಗಳಿಂದ ಖಚಿತ ಮಾಹಿತಿ
– 300 ಅಂಕಗಳ ಪ್ರಶ್ನೆಗೆ ಟ್ರೈನಿಂಗ್
ಬೆಂಗಳೂರು/ದಾವಣಗೆರೆ: ಪಶು ವೈದ್ಯಾಧಿಕಾರಿ ಹುದ್ದೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ವಿಚಾರಣೆ ವೇಳೆ ಅಭ್ಯರ್ಥಿಯೊಬ್ಬರು ತಪ್ಪೊಪ್ಪಿಗೆ ನೀಡಿದ್ದು ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ʻಪಬ್ಲಿಕ್ ಟಿವಿʼಗೆ ಮಾಹಿತಿ ಲಭ್ಯವಾಗಿದೆ.
ಇಡಿ ಮುಂದೆ ಅಭ್ಯರ್ಥಿಯಿಂದ ಸ್ಫೋಟಕ ಹೇಳಿಕೆ
ಅಭ್ಯರ್ಥಿಯ ಹೇಳಿಕೆ ಪ್ರಕಾರ, 80 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮಾತುಕತೆ ನಡೆದಿತ್ತು. ಇದರಲ್ಲಿ 40 ಲಕ್ಷ ರೂ. ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಇದಲ್ಲದೆ, ತಮ್ಮನ್ನೂ ಸೇರಿದಂತೆ ಕೆಲ ಅಭ್ಯರ್ಥಿಗಳನ್ನ ದಾವಣಗೆರೆಯ ರೆಸಾರ್ಟ್‌ನಲ್ಲಿ ಇರಿಸಿ ತರಬೇತಿ ನೀಡಲಾಗಿತ್ತು ಎಂದು ಅಭ್ಯರ್ಥಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ರೆಸಾರ್ಟ್‌ನಲ್ಲೇ ತರಬೇತಿ
ಅಭ್ಯರ್ಥಿಯ ಹೇಳಿಕೆಯಂತೆ, ರೆಸಾರ್ಟ್‌ನಲ್ಲಿ ತರಬೇತಿ ಪಡೆದ ಬಳಿಕವೇ ಪರೀಕ್ಷೆ ಎದುರಿಸಲಾಗಿತ್ತು. ಮೊದಲ ಪತ್ರಿಕೆಯ 300 ಅಂಕಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿತ್ತು ಎಂಬ ಅಂಶವೂ ವಿಚಾರಣೆಯಲ್ಲಿ ಹೊರಬಂದಿದೆ ಎಂದು ಮೂಲಗಳು ʻಪಬ್ಲಿಕ್ ಟಿವಿʼಗೆ ತಿಳಿಸಿವೆ. ಇದನ್ನೂ ಓದಿ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ಸಚಿವ ಸಂಪುಟ ಶಿಫಾರಸು

ದಾವಣಗೆರೆ ರೆಸಾರ್ಟ್ ಮೇಲೆ ಇಡಿ ದಾಳಿ
ಹೆಸರು ಹೇಳದ ಅಭ್ಯರ್ಥಿ ನೀಡಿದ ಮಾಹಿತಿ ಆಧಾರದ ಮೇರೆಗೆ ದಾವಣಗೆರೆಯಲ್ಲಿರುವ ಸಂಬಂಧಿತ ರೆಸಾರ್ಟ್ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಅಭ್ಯರ್ಥಿಯ ಹೇಳಿಕೆ ಮತ್ತು ಇಡಿ ದಾಳಿ ತನಿಖೆಯಲ್ಲಿ ಮಹತ್ವದ ಸಾಕ್ಷ್ಯವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು: ಬೊಮ್ಮಾಯಿ

