Bengaluru City
ರಕ್ಷಿತ್ ಶೆಟ್ಟಿ, ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಬೆಂಗಳೂರು: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ 9ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೇ ಶಾಂತಿಕ್ರಾಂತಿ ಚಿತ್ರದ ‘ಮಧ್ಯ ರಾತ್ರಿಲಿ, ಹೈವೇ ರಸ್ತೆಲಿ’ ಹಾಡಿನ ಸಂಗೀತವನ್ನ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಹ ಸ್ಟುಡಿಯೋಸ್ ವಿರುದ್ಧ ಲಹರಿ ಆಡಿಯೋ 2017ರ ಜನವರಿ 11ರಂದು ಕೃತಿಚೌರ್ಯದ ಪ್ರಕರಣವನ್ನು ದಾಖಲಿಸಿತ್ತು.
ಪ್ರಕರಣದ ವಿಚಾರಣೆಗೆ ಪದೇ-ಪದೇ ಗೈರಾದ ಕಾರಣ 9ನೇ ಎಸಿಎಂಎಂ ನ್ಯಾಯಾಲಯವು ರಕ್ಷಿತ್ ಶೆಟ್ಟಿ ಹಾಗೂ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇದರಿಂದಾಗಿ ಇಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿದ್ದಲ್ಲಿ ಪೊಲೀಸರು ಅವರನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಲಿದ್ದಾರೆ.
ಶಾಂತಿಕ್ರಾಂತಿ ಸಿನಿಮಾದ ‘ಮಧ್ಯ ರಾತ್ರಿಲಿ, ಹೈವೇ ರಸ್ತೆಲಿ’ ಹಾಡಿನ ಸಂಗೀತವನ್ನು ಕದ್ದು ಕಿರಿಕ್ ಪಾರ್ಟಿ ಚಿತ್ರದ ಜನಪ್ರಿಯ ಹಾಡು ‘ಹೂ ಆರ್ ಯು’ ನಲ್ಲಿ ಬಳಸಲಾಗಿದೆ ಎಂಬ ಆರೋಪಿಸಲಾಗಿದೆ. ಆದರೆ ‘ಮಧ್ಯ ರಾತ್ರಿಲಿ, ಹೈವೇ ರಸ್ತೆಲಿ’ ಹಾಡು ಲಹರಿ ಆಡಿಯೋ ಒಡೆತನಕ್ಕೆ ಸೇರಿದೆ.
