ತಿರುವನಂತಪುರಂ: ಕೇರಳದಲ್ಲಿ ಭರಪೂರ ಗ್ಯಾರಂಟಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ (Congress) ನೇತೃತ್ವದ ಯುಡಿಎಫ್ (UDF) ಸರ್ಕಾರಕ್ಕೆ ಈಗ ರಾಜ್ಯದ ಆರ್ಥಿಕ ಪರಿಸ್ಥಿತಿ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ವಿ.ಡಿ. ಸತೀಶನ್(V. D. Satheesan) ಅವರು ವಿಧಾನಸಭೆಯಲ್ಲಿ ಮಂಡಿಸಿರುವ ಶ್ವೇತಪತ್ರ (White Paper) ರಾಜ್ಯದ ಭೀಕರ ಆರ್ಥಿಕ ದಿವಾಳಿತನವನ್ನು ಬಿಚ್ಚಿಟ್ಟಿದ್ದು, ಕೇರಳ ಬರೋಬ್ಬರಿ 5.07 ಲಕ್ಷ ಕೋಟಿ ರೂಪಾಯಿಗಳ ಸಾಲದ ಸುಳಿಗೆ ಸಿಲುಕಿರುವುದು ಅಧಿಕೃತವಾಗಿ ಬಹಿರಂಗವಾಗಿದೆ.
ಹಿಂದಿನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (LDF) ಸರ್ಕಾರದ ಅವೈಜ್ಞಾನಿಕ ಆಡಳಿತವೇ ಈ ದುಸ್ಥಿತಿಗೆ ಕಾರಣ ಎಂದು ಶ್ವೇತಪತ್ರದಲ್ಲಿ ದೂರಲಾಗಿದೆ. ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ನೇತೃತ್ವದ ಸಮಿತಿ ಈ ವರದಿಯನ್ನು ಸಿದ್ಧಪಡಿಸಿದೆ.
ಶ್ವೇತಪತ್ರದಲ್ಲಿ ಏನಿದೆ?
ರಾಜ್ಯದ ಒಟ್ಟು ಬಾಧ್ಯತೆಗಳು (Outstanding Liabilities) ಬರೋಬ್ಬರಿ 5.07 ಲಕ್ಷ ಕೋಟಿ ರೂ. ತಲುಪಿದ್ದು, ಇದು ರಾಜ್ಯದ ಒಟ್ಟು ದೇಶೀಯ ಉತ್ಪನ್ನದ (GSDP) 35.5% ರಷ್ಟಾಗಿದೆ. ಹಿಂದಿನ ಸರ್ಕಾರದಿಂದ ಬಂದಿರುವ ವಿವಿಧ ಯೋಜನೆಗಳು ಹಾಗೂ ವೇತನಗಳ ಬಾಕಿ ಮೊತ್ತವೇ ಸುಮಾರು 49,000 ಕೋಟಿ ರೂ. ನಷ್ಟಿದೆ.
ರಾಜ್ಯದ ಒಟ್ಟು ಆದಾಯದ 77.6% ರಷ್ಟು ಹಣ ಕೇವಲ ಸರ್ಕಾರಿ ನೌಕರರ ಸಂಬಳ, ನಿವೃತ್ತಿ ವೇತನ (Pension) ಮತ್ತು ಸಾಲದ ಬಡ್ಡಿ ಪಾವತಿಗೆ ಬಳಕೆಯಾಗುತ್ತಿದೆ. ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಮತ್ತೆ ಡಿಲಿಮಿಟೇಷನ್ ಬಿಲ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ

ರಾಜ್ಯದ ಆದಾಯದ 20.9% ಭಾಗ ಕೇವಲ ಹಳೇ ಸಾಲಗಳ ಬಡ್ಡಿಯನ್ನು ತೀರಿಸಲು ವಿನಿಯೋಗವಾಗುತ್ತಿದೆ. ಅಂದರೆ ರಾಜ್ಯ ಗಳಿಸುವ ಪ್ರತಿ 100 ರೂ.ನಲ್ಲಿ ಸುಮಾರು 21 ಕೋಟಿ ರೂ. ಕೇವಲ ಬಡ್ಡಿಗೇ ಹೋಗುತ್ತಿದೆ. ಇದು ರಾಜ್ಯವನ್ನು ಮತ್ತಷ್ಟು ಸಾಲದ ಸುಳಿಗೆ ತಳ್ಳುತ್ತಿದೆ. ಇದು ರಾಷ್ಟ್ರೀಯ ಸರಾಸರಿಗಿಂತ 12.2% ದುಪ್ಪಟ್ಟಾಗಿದೆ.
ರಾಜ್ಯದ ಬಂಡವಾಳ ವೆಚ್ಚ (Capital Expenditure) ಜಿಎಸ್‌ಡಿಪಿಯ ಕೇವಲ 1.3% ರಷ್ಟಿದ್ದು, ಇದು ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.
ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಆಡಳಿತಾವಧಿಯ ಪ್ರಮುಖ ಸಂಸ್ಥೆಯಾದ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ವೆಚ್ಚದಲ್ಲಿ 20% ರಷ್ಟು ಹಣವನ್ನು ಕೇವಲ ಕಣ್ಣೂರು ಜಿಲ್ಲೆಯೊಂದಕ್ಕೇ ರಾಜಕೀಯ ಆದ್ಯತೆ ಮೇರೆಗೆ ಬಳಸಲಾಗಿದೆ.
ರಾಜ್ಯದ ದಿನನಿತ್ಯದ ಆಡಳಿತ ನಡೆಸಲು ಮತ್ತು ಕಲ್ಯಾಣ ಯೋಜನೆಗಳ ಹಣ ಪಾವತಿಸಲು ಪ್ರತಿ ತಿಂಗಳು ಸರ್ಕಾರವು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಭದ್ರತಾ ಪೆನ್ಷನ್‌ಗಳು (Social Security Pensions), ಗುತ್ತಿಗೆದಾರರ ಬಿಲ್‌ಗಳು ಮತ್ತು ಕೆಎಸ್‌ಆರ್‌ಟಿಸಿ (KSRTC) ನೌಕರರ ಸಂಬಳ ತಿಂಗಳುಗಟ್ಟಲೆ ಬಾಕಿ ಉಳಿಯಲು ಈ ಹಣಕಾಸಿನ ಕೊರತೆಯೇ ಕಾರಣ ಎಂದು ಉಲ್ಲೇಖಿಸಲಾಗಿದೆ.
ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ನೇತೃತ್ವದ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿದ್ದು ಆರ್ಥಿಕ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು. ಸಾರ್ವಜನಿಕ ವಲಯದ ಉದ್ದಿಮೆಗಳ (PSU) ಮರುರಚನೆ ಮತ್ತು ಖಾಸಗೀಕರಣದ ಪ್ರಸ್ತಾಪ. ಕೆಐಐಎಫ್‌ಬಿ (KIIFB) ಸಂಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತರುವಂತೆ ಸೂಚಿಸಿದೆ.
ಈ ಶ್ವೇತಪತ್ರವನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಆರ್ಥಿಕ ಪಾರದರ್ಶಕತೆಯ ನಡೆ ಎಂದು ಕರೆದಿದ್ದರೆ, ವಿರೋಧ ಪಕ್ಷದ ನಾಯಕರಾದ ಪಿಣರಾಯಿ ವಿಜಯನ್ ಮತ್ತು ಮಾಜಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಇದು “ರಾಜಕೀಯ ಪ್ರೇರಿತ ವರದಿ” ಎಂದು ತಿರುಗೇಟು ನೀಡಿದ್ದಾರೆ.
