– ಪುದುಚೆರಿಯಲ್ಲಿ ಕೆನೆತ್ ಹಾಗೂ ಶ್ವೇತಾ ನಡುವೆ ಗಲಾಟೆ
ಬೆಂಗಳೂರು: ಕೆ.ಆರ್.ಪುರದಲ್ಲಿ(KR Pura Murder Case) ನಡೆದ ತ್ರಿಬಲ್ ಮರ್ಡರ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೆನೆತ್‌ನನ್ನು ಪೊಲೀಸರು ಪುದುಚೇರಿಯಲ್ಲಿ(Puducherry) ಬಂಧಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಕೆ.ಆರ್.ಪುರ ಪೊಲೀಸರು ಬೆಂಗಳೂರಿಗೆ ಕರೆತಂದು ಬಂಧನ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಆರೋಪಿ ಶ್ವೇತಾ ಪೊಲೀಸರ ವಶದಲ್ಲಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ನಡುವೆ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು.
ಪೊಲೀಸರ ತನಿಖೆ ವೇಳೆ ಶ್ವೇತಾ ಮತ್ತು ಕೆನೆತ್ ಇಬ್ಬರೂ ಬೆಂಗಳೂರಿನಿಂದ ಬೈಕ್‌ನಲ್ಲಿ ಪುದುಚೇರಿಗೆ ತೆರಳಿರುವುದು ಗೊತ್ತಾಗಿದೆ. ಕೆನೆತ್ ಶ್ವೇತಾಳನ್ನು ಪುದುಚೇರಿವರೆಗೆ ಕರೆದೊಯ್ದಿದ್ದನು.
ಪುದುಚೇರಿಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಯಾವ ಕಾರಣಕ್ಕೆ ಗಲಾಟೆಯಾಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ಕೊಲೆ ಪ್ರಕರಣದ ವಿಚಾರದಲ್ಲೇ ಮಾತಿನ ಚಕಮಕಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗಲಾಟೆಯ ಬಳಿಕ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಕೆನೆತ್ ಶ್ವೇತಾಳನ್ನು ಪುದುಚೇರಿಯಲ್ಲೇ ಬಿಟ್ಟು ಹೋಗಿದ್ದ. ಬಳಿಕ ಶ್ವೇತಾ ಪುದುಚೇರಿ ರೈಲು ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಅಲ್ಲಿಂದ ಬೇರೆ ಕಡೆ ತೆರಳಲು ಆಕೆ ಯೋಜನೆ ರೂಪಿಸಿದ್ದಳಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ಕೆಆರ್ ಪುರಂ ತ್ರಿವಳಿ ಹತ್ಯೆ ಕೇಸ್ – ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ
ಕೆನೆತ್ ಪತ್ತೆಗಾಗಿ ಕೆ.ಆರ್.ಪುರ ಪೊಲೀಸರು ತಿರುಚಿ, ವೆಲಾಂಗಣಿ, ಚೆನ್ನೈ ಹಾಗೂ ಕೊಯಂಬತ್ತೂರಿನಲ್ಲಿ ಹುಡುಕಾಟ ನಡೆಸಿದ್ದರು. ಆತ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಕೊನೆಗೆ ಪುದುಚೇರಿಗೆ ತಲುಪಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಆತನ ಸಂಚಾರದ ಮಾಹಿತಿ ಆಧರಿಸಿ ಎರಡು ಪೊಲೀಸ್ ತಂಡಗಳು ನಿರಂತರವಾಗಿ ಬೆನ್ನುಹತ್ತಿದ್ದವು. ಕೊನೆಗೆ ಕಳೆದ ರಾತ್ರಿ ಪುದುಚೇರಿಯಲ್ಲಿ ಕೆನೆತ್‌ನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ಇಂದು ಕೆ.ಆರ್ ಪುರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಬಂಧನ ಪ್ರಕ್ರಿಯೆ ನಡೆಸಲಾಗುತ್ತಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.ಇದನ್ನೂ ಓದಿ: ಕೆ.ಆರ್ ಪುರ ತ್ರಿಬಲ್ ಮರ್ಡರ್ ಕೇಸ್; ಒಂದು ಕೊಲೆಗೆ ಸ್ಕೆಚ್, ಆಗಿದ್ದು ಮೂರು ಮರ್ಡರ್
