– ಆರೋಪಿ ಕೆನತ್ ಮನೆಯಲ್ಲಿ ಪ್ಲಾಸ್ಟಿಕ್ ಡ್ರಮ್, ಕಟ್ಟರ್, ಸುತ್ತಿಗೆ ಪತ್ತೆ
ಬೆಂಗಳೂರು: ಕೆ.ಆರ್ ಪುರ(K R Pura) ತ್ರಿವಳಿ ಕೊಲೆ ಪ್ರಕರಣದಲ್ಲಿ(Murder Case), ಮೊದಲಿಗೆ ಆರೋಪಿಗಳು ತಾಯಿ ಮುತ್ತುಲಕ್ಷ್ಮೀ ಅವರನ್ನು ಮಾತ್ರ ಕೊಲೆ ಮಾಡಲು ಯೋಜನೆ ರೂಪಿಸಿದ್ದರು. ಕೊಲೆ ಬಳಿಕ ಮೃತದೇಹವನ್ನು ರಾತ್ರಿ ವೇಳೆ ಬೇರೆಡೆಗೆ ಸ್ಥಳಾಂತರಿಸುವ ಪ್ಲ್ಯಾನ್ ಮಾಡಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆಸ್ತಿಗಾಗಿ ಪ್ರಿಯಕರ ಕೆನತ್‌ನೊಂದಿಗೆ ಸೇರಿ ಹೆತ್ತವರನ್ನೇ ಕೊಂದ ಶ್ವೇತಾ, ಮೊದಲಿಗೆ ತನ್ನ ತಾಯಿ ಮುತ್ತುಲಕ್ಷ್ಮೀಯನ್ನಷ್ಟೇ ಕೊಲ್ಲಲು ಸಂಚು ರೂಪಿಸಿದ್ದಳು. ಚಾಕುವಿನಿಂದ ಇರಿದ ನಂತರ ಅವರ ಮೃತದೇಹವನ್ನು ಸೋಮವಾರ ರಾತ್ರಿ ಸ್ಥಳಾಂತರಿಸಲು ಆರೋಪಿಗಳು ಸಿದ್ಧತೆ ನಡೆಸಿದ್ದರು. ಆದರೆ ರಾತ್ರಿ 8:30ರ ವೇಳೆಗೆ ಶ್ವೇತಾಳ ತಂದೆ ಮತ್ತು ಸಹೋದರಿ ಮನೆಗೆ ಬಂದ ಕಾರಣ ಅವರಿಬ್ಬರ ಪ್ಲ್ಯಾನ್ ಫೇಲ್ ಆಗಿದೆ. ಇದರಿಂದ ಗಾಬರಿಗೊಂಡ ಆರೋಪಿಗಳು ಅನಿವಾರ್ಯವಾಗಿ ಮತ್ತಿಬ್ಬರನ್ನು ಕೊಲೆ ಮಾಡಿದ್ದಾರೆ.
ತನಿಖೆ ವೇಳೆ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಕೆನತ್ ಕೆ.ಆರ್ ಪುರದಲ್ಲಿದ್ದ ಫ್ಲ್ಯಾಟ್ ಜೊತೆಗೆ ಹೆಚ್‌ಎಎಲ್ ಸಮೀಪದ ಗುರುರಾಜ ಲೇಔಟ್‌ನಲ್ಲಿ ಮತ್ತೊಂದು ಸಿಂಗಲ್ ಬಿಹೆಚ್‌ಕೆ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದ. ತಿಂಗಳಿಗೆ 15 ಸಾವಿರ ರೂ. ಬಾಡಿಗೆ ಕಟ್ಟುತ್ತಿದ್ದ ಈ ಫ್ಲ್ಯಾಟ್‌ಗೆ ಮೃತದೇಹವನ್ನು ಸ್ಥಳಾಂತರಿಸಲು ಇಬ್ಬರು ಮುಂದಾಗಿದ್ದರು.ಇದನ್ನೂ ಓದಿ: ಕೆಆರ್ ಪುರಂ ತ್ರಿವಳಿ ಹತ್ಯೆ ಕೇಸ್ – ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ
ಕೊಲೆ ನಡೆದ ಬಳಿಕ ಕೆನತ್ ಮತ್ತು ಶ್ವೇತಾ ಹೊಸದಾಗಿ ಖರೀದಿಸಿದ್ದ ಸೂಟ್‌ಕೇಸ್‌ಗಳೊಂದಿಗೆ ಇದೇ ಫ್ಲ್ಯಾಟ್‌ಗೆ ಹೋಗಿದ್ದಾರೆ. ಫ್ಲ್ಯಾಟ್ ಪರಿಶೀಲನೆ ನಡೆಸಿದ ವೇಳೆ ಪೊಲೀಸರಿಗೆ ಹಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಆರೋಪಿ ಕೆನತ್ ವಾಸವಿದ್ದ ದೊಡ್ಡನಕ್ಕುಂದಿಯ ಬಾಡಿಗೆ ಮನೆಯಲ್ಲಿ ಪ್ಲಾಸ್ಟಿಕ್ ಡ್ರಮ್, ಕಟ್ಟರ್ ಹಾಗೂ ಸುತ್ತಿಗೆ ಪತ್ತೆಯಾಗಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವ್ಯಕ್ತಿಯ ಮನೆಯಲ್ಲಿ ಈ ವಸ್ತುಗಳು ಸಿಕ್ಕಿರುವುದು ಪೊಲೀಸರಲ್ಲಿ ಹಲವು ಅನುಮಾನಗಳಿಗೆ ಮೂಡಿಸಿವೆ.
ಮೂವರ ಕೊಲೆ ಬಳಿಕ ಆರೋಪಿಗಳು ನೇರವಾಗಿ ದೊಡ್ಡನಕ್ಕುಂದಿಯ ಬಾಡಿಗೆ ಮನೆಗೆ ತೆರಳಿದ್ದಾರೆ. ಅಲ್ಲಿ ಬಿಸಿ ನೀರಿಗೆ ಖಾರದ ಪುಡಿ ಹಾಕಿ ಮನೆಯೊಳಗೆ ಚೆಲ್ಲಿರುವುದು ಹಾಗೂ ಅದೇ ನೀರಿನಲ್ಲಿ ರಕ್ತದ ಕಲೆಗಳಿದ್ದ ಕೈಗಳನ್ನು ತೊಳೆದುಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಕೆನತ್ ಸಿಗೇಹಳ್ಳಿಯ ಫ್ಲ್ಯಾಟ್‌ಗೆ ಸ್ಥಳಾಂತರವಾಗಿದ್ದರೂ, ಹಳೆಯ ಬಾಡಿಗೆ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದ. ಇದರಿಂದ ಮೃತದೇಹವನ್ನು ಅಲ್ಲಿಗೆ ಸಾಗಿಸಿ ನಾಶಪಡಿಸುವ ಉದ್ದೇಶವಿತ್ತೇ ಎಂಬ ಅನುಮಾನ ಮೂಡಿದೆ. ಇದೇ ಕಾರಣಕ್ಕೆ ಮುತ್ತುಲಕ್ಷ್ಮೀ ಅವರ ಮೃತದೇಹವನ್ನು ಶೌಚಾಲಯದಲ್ಲಿ ಇರಿಸಲಾಗಿತ್ತು ಎಂಬ ಶಂಕೆಯೂ ತನಿಖೆಯಲ್ಲಿ ವ್ಯಕ್ತವಾಗಿದೆ.
ಏನಿದು ಪ್ರಕರಣ?
ಲವ್ವರ್ ಕೆನತ್‌ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಶ್ವೇತಾ, ಆತನೊಂದಿಗೆ ಸೇರಿ 30 ಲಕ್ಷ ರೂ. ಸಾಲ ಮಾಡಿದ್ದಳು. ಆ ಸಾಲವನ್ನು ತೀರಿಸಲು ಮನೆಯವರ ಬಳಿ ಆಸ್ತಿಯಲ್ಲಿ ಪಾಲು ಬೇಕೆಂದು ಆಗಾಗ ಜಗಳವಾಡುತ್ತಿದ್ದಳು. ಆಸ್ತಿಯಲ್ಲಿ ಪಾಲು ಕೊಡಲು ಒಪ್ಪದಿದ್ದಕ್ಕೆ ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ನಂತರ ತಲೆಮರೆಸಿಕೊಂಡಿದ್ದ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದು, ಆಕೆಯ ಲವ್ವರ್ ಕೆನತ್ ತಲೆಮರೆಸಿಕೊಂಡಿದ್ದಾನೆ.
ಪ್ರಕರಣ ಸಂಬಂಧ ಶ್ವೇತಾಳನ್ನು ಬಂಧಿಸಿರುವ ಪೊಲೀಸರು, 47ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆಕೆಯನ್ನು 7 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಕೆನತ್‌ಗಾಗಿ ಬೆಂಗಳೂರು, ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಪ್ರಕರಣದ ತನಿಖೆಗಾಗಿ ಒಟ್ಟು ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.ಇದನ್ನೂ ಓದಿ: ಕೆ.ಆರ್. ಪುರ ತ್ರಿವಳಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; 30 ಲಕ್ಷ ಸಾಲವೇ ಹತ್ಯೆಗೆ ಕಾರಣವಾಯ್ತಾ?
