Connect with us

Latest

ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

Published

on

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ್ ರಾವ್ ಇಂದು ಆಂಧ್ರಪ್ರದೇಶಲ್ಲಿರುವ ತಿರುಪತಿ ದೇಗುಲಕ್ಕೆ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯವಾಗಿದ್ದು, ತಮ್ಮ ಬೇಡಿಕೆ ಈಡೇರಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ದೇವರಿಗೆ ತಾವರೆ ಮಾದರಿಯ ಸಾಲಿಗ್ರಾಮ ನೆಕ್ಲೆಸ್(14.9 ಕೆ.ಜಿ), 5 ಎಳೆಯ ಕಂಠಿ(4.65 ಕೆ.ಜಿ) ಯನ್ನು ಶ್ರೀ ದೇವರಿಗೆ ಅರ್ಪಿಸಿದ್ದಾರೆ. ಇದಾದ ಬಳಿಕ ತಿರುಚಾನೂರ್‍ಗೆ ತೆರಳಿ ಅಲ್ಲಿಯ ಪದ್ಮಾವತಿ ದೇವಿಯ ದರ್ಶನ ಪಡೆದು ದೇವಿಗೆ ಮೂಗುತಿಯನ್ನು ಅರ್ಪಿಸಲಿದ್ದಾರೆ. ಒಟ್ಟಿನಲ್ಲಿ ತಿರುಪತಿಗೆ 5. 5 ಕೋಟಿ ರೂ. ಮೌಲ್ಯದ ಒಡವೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯವೆಂದು ಘೋಷಣೆಯಾದ ಬಳಿಕ ಮೊದಲ ಬಾರಿಗೆ ತಮ್ಮ ಪತ್ನಿ ಶೋಭಾ ರಾವ್, ಮಗ ಕೆ.ಟಿ ರಾಮ ರಾವ್ ಹಾಗೂ ಮಗಳು ಕೆ ಕವಿತಾ ಮತ್ತು ಕುಟುಂಬದವರೊಂದಿಗೆ ಜೊತೆ ಎರಡು ದಿನಗಳ ಆಂಧ್ರ ಭೇಟಿಯಲ್ಲಿರುವ ಕೆಸಿಆರ್, ಮಂಗಳವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿ ಬೆಟ್ಟಕ್ಕೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಆಂಧ್ರದ ಅರಣ್ಯ ಸಚಿವ ಬಿ ಗೋಪಾಕೃಷ್ಣ ರೆಡ್ಡಿ ಹಾಗೂ ಮತ್ತಿತರ ಶಾಸಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಶ್ರೀ ದೇವರ ದರ್ಶನ ಪಡೆದು ಬಳಿಕ ಆಭರಣಗಳನ್ನು ಹಸ್ತಾಂತರಿಸಿದ್ದಾರೆ.

ವಾರಂಗಲ್ ದೇವಿಗೆ ಚಿನ್ನ: 2016ರ ಅಕ್ಟೋಬರ್ ತಿಂಗಳಿನಲ್ಲಿ ಕೆಸಿಆರ್ 3.5 ಕೋಟಿ ಮೌಲ್ಯದ 12 ಕೆ.ಜಿ ಚಿನ್ನವನ್ನು ವಾರಂಗಲ್‍ನಲ್ಲಿರುವ ಭದ್ರಕಾಳಿ ದೇವಿಗೆ ಕಾಣಿಕೆಯಾಗಿ ಅರ್ಪಿಸಿದ್ದರು. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಕೆಸಿಆರ್ ವಿಜಯವಾಡಾದ ಕನಕ ದುರ್ಗಾ ದೇವಿಗೆ ಮೂಗುತಿ ಹಾಗೂ ತಿರುಮಲದ ವೆಂಕಟೇಶ್ವರ ದೇವರಿಗೆ ನೆಕ್ಲೆಸ್ ನೀಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in