ಕಾರವಾರ: ಜಾನುವಾರು ಮೈತೊಳೆಯಲು ಹೋದ ಯುವಕನೊಬ್ಬ ಎತ್ತಿಗೆ ಕಟ್ಟಿದ್ದ ಹಗ್ಗ ಕಾಲಿಗೆ ಸಿಲುಕಿದನ್ನು ಬಿಡಿಸಿಕೊಳ್ಳಲು ಹೋಗಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಯರೆಬೈಲಿನ ಬೇಡ್ತಿ ಹಳ್ಳದಲ್ಲಿ ಈ ಘಟನೆ ನಡೆದಿದೆ.
ದ್ಯಾಮಣ್ಣ ನೀರುಪಾಲಾದ ಯುವಕ. ದ್ಯಾಮಣ್ಣ ಇಂದು ಜಾನುವಾರುಗಳನ್ನು ಮೇಯಿಸಲು ಹಳ್ಳದ ಬಳಿ ಹೋಗಿದ್ದರು. ಈ ವೇಳೆ ತನ್ನ ಎತ್ತುಗಳನ್ನು ನೀರಿನಲ್ಲಿ ನಿಲ್ಲಿಸಿಕೊಂಡು ಎತ್ತಿನ ಮೈ ತೊಳೆಯುತ್ತಿರುವಾಗ ಎತ್ತಿಗೆ ಕಟ್ಟಿದ ಹಗ್ಗವು ಕಾಲಿಗೆ ಸಿಲುಕಿಕೊಂಡಿದೆ. ಹಗ್ಗವನ್ನು ಬಿಡಿಸಿಕೊಳ್ಳುವಾಗ ಆಯತಪ್ಪಿ ನೀರಿನೊಳಗೆ ಬಿದ್ದಿದ್ದು, ಹಳ್ಳದ ನೀರಿನ ಹರಿವು ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾರೆ.
Advertisement
Advertisement
ಮಳೆ ಬಂದಾಗ ಹಳ್ಳ ತುಂಬಿ ಹರಿಯುತ್ತಿರುವ ವೇಳೆ ದ್ಯಾಮಣ್ಣ ಸೆಲ್ಫಿ ತೆಗೆದುಕೊಂಡಿದ್ದರು. ಇಂದು ಅದೇ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಯುವಕನ ಶವವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.