Sunday, 18th August 2019

Recent News

ನಿಸರ್ಗದ ಮಡಿಲಿನಲ್ಲಿ ಮೈದುಂಬಿ ಹರಿಯುತ್ತಿದೆ ಗೋಲಾರಿ ಜಲಪಾತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ತೋಡೂರು ಗ್ರಾಮದ ಬಳಿಯಿರುವ ಗೋಲಾರಿ ಜಲಪಾತ ಇದೀಗ ಪ್ರವಾಸಿಗರ ಹಾಟ್ ಫೇವರೇಟ್. ಮಳೆಯ ನೀರು ಗುಡ್ಡದ ಮೇಲಿನಿಂದ ಬೀಳುವುದರಿಂದ ನಿರ್ಮಾಣಗೊಂಡ ಈ ಜಲಪಾತ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಸುಮಾರು 25 ಅಡಿ ಎತ್ತರದಿಂದ ಬೀಳುವ ಗೋಲಾರಿ ಜಲಪಾತ ಮಳೆಗಾಲದಲ್ಲಿ ಮಾತ್ರ ಮೈತುಂಬಿ ಹರಿಯುತ್ತದೆ. ಅದರಲ್ಲೂ ವೀಕೆಂಡ್ ದಿನದಲ್ಲಂತೂ ಗೋಲಾರಿ ಜಲಪಾತ ನೋಡಲು ಬರುವವರ ಸಂಖ್ಯೆ ಅಧಿಕವಾಗಿರುತ್ತದೆ. ಇನ್ನು ಕಾನನದ ನಡುವೆ ಜಲಪಾತವಿದ್ದರೂ ಸಹ ಸುರಕ್ಷಿತ ಪ್ರದೇಶವಾಗಿರುವುದರಿಂದ ಜಲಪಾತ ನೋಡುಗರ ಸಂಖ್ಯೆ ಹೆಚ್ಚಾಗಿದೆ.

ಹೋಗುವುದು ಹೇಗೆ?: ಕಾರವಾರದಿಂದ ಅಂಕೋಲಾ ಮಾರ್ಗ ಮಧ್ಯೆ ಸಿಗುವ ತೋಡೂರು ಗ್ರಾಮದ ಮುಖ್ಯ ರಸ್ತೆಯಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿ ಗೋಲಾರಿ ಜಲಪಾತವಿದೆ. ಗುಡ್ಡದ ಮೇಲೆ ಕಾಡಿನ ಹಾದಿಯಲ್ಲಿ ಸುಮಾರು 2 ಕಿಲೋ ಮೀಟರ್ ಟ್ರೆಕ್ಕಿಂಗ್ ಮಾಡಿ ಗುಡ್ಡದ ತುದಿಗೆ ತೆರಳಿದ್ರೆ ಗೋಲಾರಿ ಫಾಲ್ಸ್ ಕಾಣಸಿಗುತ್ತದೆ. ಇನ್ನು ಗೋಲಾರಿ ಜಲಪಾತ ನೋಡುವವರು ಸುಮಾರು ಒಂದೂವರೆ ಕಿಲೋ ಮೀಟರ್‍ನಷ್ಟು ಗುಡ್ಡ ಹತ್ತಲೆಬೇಕು. ಆದ್ರೆ ಗುಡ್ಡ ಹತ್ತಲು ಆಗುವುದಿಲ್ಲ ಅನ್ನುವವರು ಜಲಪಾತದ ಕೆಳಗೆ ಬರುವ ನೀರಿನಲ್ಲಿ ಆಟವಾಡಿ ಎಂಜಾಯ್ ಮಾಡಬಹುದು.

ಟ್ರೆಕ್ಕಿಂಗ್ ಮಾಡಿ ಸುಸ್ತಾದ ಪ್ರವಾಸಿಗರು ಜಲಪಾತದ ಕೆಳಗೆ ನೀರಿಗೆ ಮೈಯೊಡ್ಡಿ ಕುಳಿತರೇ ಎಲ್ಲಾ ಸುಸ್ತು ಮಾಯ. ಕುಟುಂಬ ಸಮೇತ ಬಂದು ಎಂಜಾಯ್ ಮಾಡಲು ಒಳ್ಳೆಯ ತಾಣವಾಗಿರುವುದರಿಂದ ರಾಜ್ಯ ಹೊರ ರಾಜ್ಯದಿಂದಲೂ ಅಧಿಕ ಪ್ರವಾಸಿಗರು ಆಗಮಿಸುತ್ತಾರೆ.

ಮಳೆಗಾಲದಲ್ಲಿ ಸೂಕ್ತ: ಗೋಲಾರಿ ಜಲಪಾತ ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾದಾಗ ನೀರು ಧುಮ್ಮಿಕ್ಕುವ ಮೂಲಕ ಸೃಷ್ಟಿಯಾಗಿ ನಂತರ ನವೆಂಬರ್ ವೇಳೆಯವರೆಗೂ ನೀರಿನಿಂದ ತುಂಬಿಕೊಂಡು ಪ್ರವಾಸಿಗರನಗ್ನ ಆಕರ್ಷಣೆ ಮಾಡುತ್ತಿದೆ.

ಕಾರವಾರಕ್ಕೆ ಬರುವ ಪ್ರವಾಸಿಗರು ಕೇವಲ ಸಮುದ್ರವನ್ನ ಮಾತ್ರ ನೋಡದೇ ಜಲಪಾತವನ್ನ ಸಹ ನೋಡಬಹುದು. ಗೋಲಾರಿ ಜಲಪಾತಕ್ಕೆ ಬಂದರೆ ಎರಡೂ ಅನುಭವವನ್ನ ಪಡೆಯಬಹುದು. ಒಟ್ಟಿನಲ್ಲಿ ರಜಾ ದಿನವನ್ನ ಕೂಲಾಗಿ ಕಳೆಯಬೇಕು ಎನ್ನುವವರು ಕಾರವಾರ ತಾಲೂಕಿನ ಗೋಲಾರಿ ಜಲಪಾತಕ್ಕೆ ಭೇಟಿ ನೀಡಿದರೆ ಎಂಜಾಯ್ ಮಾಡುವುದರಲ್ಲಿ ಅನುಮಾನವಿಲ್ಲ.

 

 

Leave a Reply

Your email address will not be published. Required fields are marked *