– ನಿಗದಿಗಿಂತ ಹೆಚ್ಚು ನೀರು ಹರಿಸಿದ ಸರ್ಕಾರ; ನಡುಗಡ್ಡೆಯಲ್ಲಿ ಸಿಲುಕಿದ್ದ 6 ರಾಸುಗಳ ರಕ್ಷಣೆ
ಮಂಡ್ಯ: ರಾಜ್ಯ ಸರ್ಕಾರವು ತಮಿಳುನಾಡಿಗೆ (Tamil Nadu) ಒಂದೇ ದಿನ 8000ಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸಿದೆ.
ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನದಿಯಿಂದ (Cauvery Water) ದಿಢೀರನೆ ನೀರಿನ ಪ್ರಮಾಣವನ್ನು ಹೆಚ್ಚಿಸಿದ ಪರಿಣಾಮ, ನಡುಗಡ್ಡೆಯಲ್ಲಿ ಮೇಯಲು ಹೋಗಿದ್ದ ಆರು ರಾಸುಗಳು ನಡುನೀರಿನಲ್ಲಿ ಸಿಲುಕಿ ನಂತರ ಅಗ್ನಿಶಾಮಕ ದಳದ ಸತತ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪಾರಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಬಳಿ ನಡೆದಿದೆ. ಇದನ್ನೂ ಓದಿ: ಬರದ ಮಧ್ಯೆ ರಾಜ್ಯಕ್ಕೆ ಕಾವೇರಿ ಸಿಡಿಲು; ಮತ್ತೆ 15 ದಿನ ತಮಿಳುನಾಡಿಗೆ 7.5 ಟಿಎಂಸಿ ನೀರು ಹರಿಸಲು ಸೂಚನೆ
ಗಂಜಾಂ ಗ್ರಾಮದ ಶಿವರಾಜು ಎಂಬವರಿಗೆ ಸೇರಿದ ಆರು ರಾಸುಗಳು ನಿನ್ನೆ ಎಂದಿನಂತೆ ಕಾವೇರಿ ನದಿಯ ನಡುಗಡ್ಡೆಗೆ ಹುಲ್ಲು ಮೇಯಲು ತೆರಳಿದ್ದವು. ನಿನ್ನೆ ಮುಂಜಾನೆ ನದಿಯಲ್ಲಿ ಕೇವಲ 3 ಸಾವಿರ ಕ್ಯೂಸೆಕ್ ಆಸುಪಾಸಿನಲ್ಲಿದ್ದ ನೀರಿನ ಹರಿವು, ಸಂಜೆಯ ವೇಳೆಗೆ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ಕಾರಣ 8 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣಕ್ಕೆ ದಿಢೀರ್ ಏರಿಕೆಯಾಯಿತು. ನೀರಿನ ಮಟ್ಟ ಒಮ್ಮೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಸುಗಳು ನಡುಗಡ್ಡೆಯಿಂದ ವಾಪಸ್ ಬರಲಾಗದೆ ಪ್ರವಾಹದ ಮಧ್ಯೆ ಸಿಲುಕಿಕೊಂಡವು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ತಡರಾತ್ರಿಯಿಡೀ ಹರಸಾಹಸಪಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿದರು. ನೀರಿನ ರಭಸದ ನಡುವೆಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿ, ಎಲ್ಲಾ ಆರು ರಾಸುಗಳನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ರಾಸುಗಳ ಮಾಲೀಕ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಇಂದು ದೆಹಲಿಯಲ್ಲಿ ಕಾವೇರಿ ಹೈವೋಲ್ಟೇಜ್ ಸಭೆ – ರಾಜ್ಯದ ವಾಸ್ತವ ಸ್ಥಿತಿ ಮಂಡಿಸಲು ಮಂಡ್ಯ ರೈತರ ಆಗ್ರಹ

